ಮಡಿಕೇರಿ, ಫೆ. ೧೬: ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿಲ್ಲೆಯವರೇ ಆದ ಮಲಚೀರ ಎ. ಅಯ್ಯಪ್ಪ ಅವರು ನೇಮಕಗೊಂಡಿದ್ದಾರೆ. ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ನ ಎಸ್.ಪಿ.ಯಾಗಿದ್ದ ಅಯ್ಯಪ್ಪ ಅವರು ಕೊಡಗು ಜಿಲ್ಲೆಯ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಸ್ಥಾನ ಪಡೆಯಲಿದ್ದಾರೆ. ಅಯ್ಯಪ್ಪ ಅವರು ಈ ಹಿಂದೆ ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಮೀಷನ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು.
‘ಶಕ್ತಿ’ಯೊಂದಿಗೆ ಮಾತನಾಡಿದ ಅಯ್ಯಪ್ಪ ಅವರು, ಜಿಲ್ಲಾ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಕಾನೂನು ಸುವ್ಯವಸ್ಥೆ, ಅಪರಾದ ತಡೆ ಹಾಗೂ ವ್ಯವಸ್ಥಿತ ಸಂಚಾರಕ್ಕೆ ಒತ್ತು ನೀಡಲಾಗುವುದು. ಇದರೊಂದಿಗೆ ಪೊಲೀಸ್ ಇಲಾಖಾ ಸಿಬ್ಬಂದಿಗಳ ಅಭಿವೃದ್ಧಿಗೆ ಶ್ರಮ ವಹಿಸಲಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಲತಃ ದಕ್ಷಿಣ ಕೊಡಗಿನ ಬಾಳೆಲೆಯ ರುದ್ರಬೀಡು ಗ್ರಾಮದವರಾದ ಅಯ್ಯಪ್ಪ ಅವರು ನಿವೃತ್ತ ಡಿ.ಸಿ.ಪಿ. ಮಲಚೀರ ಅಪ್ಪಣ್ಣ ಹಾಗೂ ಸರ ದಂಪತಿಯ ಪುತ್ರ.