ಕುಶಾಲನಗರ, ಫೆ. ೧೪: ಕುಶಾಲನಗರದಲ್ಲಿ ಭಾನುವಾರ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅವಧಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷಾಗಿ ಕೆ.ಎಸ್ ಮೂರ್ತಿ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಕನ್ನಡ ಬಾವುಟವನ್ನು ನೂತನ ಅಧ್ಯಕ್ಷ ಮೂರ್ತಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ‘ಜನರೆಡೆಗೆ ಸಾಹಿತ್ಯ ನಡಿಗೆ' ಎಂಬ ಘೋಷವಾಕ್ಯದಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪರಿಷತ್ತಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನೆ ಮತ್ತು ಚಟುವಟಿಕೆಗಳ ಕುರಿತು ಮಾತನಾಡಿದ ಜಿಲ್ಲಾ ಕ.ಸಾ.ಪ.ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಘನತೆ, ಗಾಂಭೀರ್ಯ ಇರಬೇಕು, ಜನರ ಸಹಭಾಗಿತ್ವದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಘಟಿಸುವ ಮೂಲಕ ‘ಹಳ್ಳಿಯೆಡೆಗೆ ಕನ್ನಡ ಸಾಹಿತ್ಯ ನಡಿಗೆ' ಕಾರ್ಯಕ್ರಮದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಮುನ್ನಡೆಸುವ ಜವಾಬ್ದಾರಿ ಕಸಾಪದ ನೂತನ ಸಮಿತಿಯ ಮೇಲಿದೆ ಎಂದು ರಮೇಶ್ ಹೇಳಿದರು.
ಸಮಾರಂಭ ಉದ್ಘಾಟಿಸಿದ ‘ಶಕ್ತಿ’ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ಜಿಲ್ಲೆಯಲ್ಲಿ ಟಿ.ಪಿ.ರಮೇಶ್ ಅವರ ವಿಶೇಷ ಪರಿಶ್ರಮದಿಂದ ಸಾಹಿತ್ಯ ಚಟುವಟಿಕೆಗಳು ಉತ್ತಮವಾಗಿ ರೂಪುಗೊಂಡಿವೆ.
ಇಂದು ಶಾಲಾ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುವ ಮೂಲಕ ಮಕ್ಕಳ ಪ್ರತಿಭೆಗೆ ಸೂಕ್ತ ಅವಕಾಶ ಒದಗಿಸಬೇಕು. ಎಲ್ಲರೂ ಜತೆಗೂಡಿ ಕನ್ನಡದ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ಪಸರಿಸುವಂತಾಗಬೇಕು ಎಂದರು.
ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್ ಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಎಲ್ಲರೂ ಸಹಕರಿಸುವ ಮೂಲಕ ಜನರೆಡೆಗೆ ಸಾಹಿತ್ಯ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಕ.ಸಾ.ಪ.ಚಟುವಟಿಕೆಗಳು ಹೊಸ ಭರವಸೆಯೊಂದಿಗೆ ಸೃಜನಶೀಲ, ಕ್ರಿಯಾತ್ಮಕ ಹಾಗೂ ವೈಚಾರಿಕತೆ ನೆಲೆಗಟ್ಟಿನಲ್ಲಿ ನಡೆಯುವಂತಾಗಲಿ ಎಂದರು.
ಜಿಲ್ಲಾ ಕ.ಸಾ..ಪ.ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್ ಮಾತನಾಡಿ, ಕನ್ನಡ ಸಾಹಿತ್ಯದ ಚಟುವಟಿಕೆಗಳು ಜನರಿಗೆ ತಲುಪಿಸುವ ಜವಾಬ್ದಾರಿ ಕಸಾಪ ಸಮಿತಿಯ ಮೇಲಿದೆ ಎಂದರು.
ತಾಲೂಕು ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಮಾತನಾಡಿದರು.
ಜಿಲ್ಲಾ ಕ.ಸಾ. ಪ.ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಸೋಮವಾರಪೇಟೆ ತಾಲೂಕು ಕ.ಸಾ.ಪ. ಅಧ್ಯಕ್ಷ ಎಸ್.ಡಿ.ವಿಜೇತ, ಮಡಿಕೇರಿ ತಾಲೂಕು ಕ.ಸಾ.ಪ.ಅಧ್ಯಕ್ಷ ಅಂಬೇಕಲ್ ನವೀನ್, ಕುಶಾಲನಗರ ಕ.ಸಾ.ಪ.ನೂತನ ಸಮಿತಿಯ ಗೌರವ ಕಾರ್ಯದರ್ಶಿ ಎಸ್.ನಾಗರಾಜ್, ಮಂಜು ಭಾರ್ಗವಿ, ಕೋಶಾಧಿಕಾರಿ ಕೆ.ವಿ.ಉಮೇಶ್ ಹೆಬ್ಬಾಲೆ, ಪದಾಧಿಕಾರಿಗಳು, ವಿವಿಧ ಸಂಸ್ಥೆಗಳ ಪ್ರಮುಖರು, ಇತರರು ಇದ್ದರು.
ಉಪನ್ಯಾಸಕಿ ಲೀಲಾವತಿ ತೊಡಿಕಾನ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಟಿ.ವಿ.ಶೈಲಾ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಮಹೇAದ್ರ ವಂದಿಸಿದರು. ಕ.ಸಾ.ಪ.ಸದಸ್ಯರು ನಾಡಗೀತೆ ಹಾಡಿದರು. ಇತ್ತೀಚೆಗೆ ಮೃತಪಟ್ಟ ಸಾಹಿತಿಗಳಾದ ಪ್ರೊ.ಚಂಪಾ, ಡಾ ಸಿದ್ದಲಿಂಗಯ್ಯ, ಸಂಗೀತ ವಿಧೂಷಿ ಲತಾ ಮಂಗೇಷ್ಕರ್, ಸುತಾರ , ಮೃತಪಟ್ಟ ಕ.ಸಾ.ಪ.ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.