ಕಣಿವೆ, ಫೆ. 13: ಕುಶಾಲನಗರ ಪಟ್ಟಣದ ಐಬಿ ರಸ್ತೆಯ ಕೆಲವು ಕಸ ತ್ಯಾಜ್ಯ ತುಂಬಿದ್ದ ಸ್ಥಳಗಳನ್ನು ಸ್ವಚ್ಛ ಮಾಡಿರುವ ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಈಗ ಹೂಗಿಡಗಳನ್ನು ನೆಟ್ಟಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಐಬಿ ರಸ್ತೆಯ ವ್ಯಾಪ್ತಿಯಲ್ಲಿ ಕಿಷ್ಕಿಂದೆಯಂತಿದ್ದ ಜಾಗವೊಂದರಲ್ಲಿ ಸ್ಥಳೀಯರು ಕಸ ತ್ಯಾಜ್ಯವನ್ನು ಎಸೆಯುತ್ತಿದ್ದರು. ಜೊತೆಗೆ ಸನಿಹವೇ ಮದ್ಯದ ಅಂಗಡಿಯೂ ಇರುವುದರಿಂದ ಮದ್ಯಪ್ರಿಯರು ಆ ಜಾಗವನ್ನು ಮೂತ್ರಾಲಯವಾಗಿ ಮಾರ್ಪಡಿಸಿದ್ದರು. ಇದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದುದನ್ನು ಮನಗಂಡ ಪಟ್ಟಣ ಪಂಚಾಯಿತಿ ಅಲ್ಲಿ ಗ್ರೀನ್ ನೆಟ್ ಒಂದನ್ನು ಅಡ್ಡಲಾಗಿ ಕಟ್ಟಿದೆ.
ಜೊತೆಗೆ ಅನುಪಯುಕ್ತ ಟಯರ್‍ಗಳಿಗೆ ಬಣ್ಣ ಬಳಿದು ಅಂದಗೊಳಿಸಿ ಆ ಸ್ಥಳದಲ್ಲಿಟ್ಟು, ಅದರೊಳಗೆ ಕೆಲವೊಂದು ಹೂಗಿಡಗಳನ್ನು ನೆಟ್ಟಿದೆ. ಜೊತೆಗೆ ಪಂಚಾಯಿತಿಯ ಕಸ ತ್ಯಾಜ್ಯ ನಿರ್ವಹಣಾ ಘಟಕದ ಬಳಿ ತಯಾರಿಸಿದ ಸಾವಯವ ಗೊಬ್ಬರವನ್ನು ತಂದು ಈ ಗಿಡಗಳಿಗೆ ಹಾಕಲಾಗಿದೆ ಎಂದು ಸ್ಥಳದಲ್ಲಿದ್ದ ಪಂಚಾಯಿತಿಯ ಆರೋಗ್ಯಾಧಿಕಾರಿ ಉದಯಕುಮಾರ್ ‘ಶಕ್ತಿ'ಗೆ ತಿಳಿಸಿದರು.