ವೀರಾಜಪೇಟೆ, ಫೆ. 13: ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತಿದ್ದು ರಸ್ತೆ ಅಗಲೀಕರಣದ ಆಗತ್ಯತೆ ಇದೆ. ಸಾರಿಗೆ ಇಲಾಖೆಯ ಮಾಹಿತಿಯಂತೆ ಕೊಡಗಿನಲ್ಲಿ ನಾಲ್ಕು ಜನರಲ್ಲಿ ಒಬ್ಬರಿಗೆ ಒಂದು ವಾಹನ ಇದೆ. ಹೀಗಿರುವಾಗ ರಸ್ತೆ ಅಭಿವೃದ್ದಿ ಅಗತ್ಯವಾಗಿದ್ದು, ಜನರು ಸಹಕಾರ ನೀಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಸಿಕ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹಾಗೂ ಪಟ್ಟಣ ಪಂಚಾಯಿತಿಯನ್ನು ಪುರಸಭೆ ಯಾಗಿಸುವಲ್ಲಿ ಶ್ರಮಿಸಿದ ಶಾಸಕ ಬೋಪಯ್ಯ ಅವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪುರಸಭೆ ಆದರೆ ಪಟ್ಟಣ ಅಭಿವೃದ್ಧಿಯಾಗಲಿದ್ದು, ಸಾಕಷ್ಠು ಅನುದಾನ ದೊರೆಯಲಿದೆ. ಪುರಸಭೆಯಾಗಿ ಅಧಿಕೃತವಾಗಿ ಚಾಲನೆಗೊಂಡರೆ ಕೇಂದ್ರದಿಂದ ರೂ. 15 ಕೋಟಿ ಅನುದಾನ ಸಿಗಲಿದೆ. ಈಗಾಗಲೆ ನಗÀರೋತ್ಥಾನದಡಿ ರೂ. 5 ಕೋಟಿ ಬಿಡುಗಡೆಯಾಗಿದ್ದು, ವಿವಿಧ ಅನುದಾನ ಸೇರಿ ಸುಮಾರು ರೂ. 9 ಕೋಟಿ ಅನುದಾನ ಅಭಿವೃದ್ಧಿ ಕೆಲಸಕ್ಕೆ ಸಿಗಲಿದೆ. ಇದರ ಸಮರ್ಪಕವಾದ ಬಳಕೆಗೆ ಸೂಕ್ತ ರೀತಿಯ ಕ್ರಿಯಾಯೋಜನೆ ರೂಪಿಸಬೇಕು. ಪಟ್ಟಣದಲ್ಲಿ ಅಗತ್ಯ ಸಭಾಂಗಣ ಹಾಗೂ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ನೀಲಿ ನಕಾಶೆಯನ್ನು ರೂಪಿಸುವಂತೆ ಶಾಸಕರು ಸೂಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಶಾಸಕ ಬೋಪಯ್ಯ ಅವರು ಚುನಾಯಿತರಾದ ಮೇಲೆ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಒದಗಿ ಬರುತ್ತಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಆಸ್ಪತ್ರೆ, ಮೀನು ಮಾರುಕಟ್ಟೆಗಳು ಅಭಿವೃದ್ಧಿಯಾಗಿವೆ. ಈಗ ಶಾಸಕರ ನಿರಂತರ ಪ್ರಯತ್ನ ದಿಂದ ಪ.ಪಂ. ಪುರಸಭೆಯಾಗಿದೆ. ಸುಸಜ್ಜಿತ ಸಭಾಂಗಣ ಹೈಟೆಕ್ ಮಾರುಕಟ್ಟೆ ನಿರ್ಮಾಣದ ಆಗತ್ಯವಿದೆ. ಪಟ್ಟಣದಲ್ಲಿ ರಸ್ತೆ ಅಗಲಿಕರಣಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.ವೇದಿಕೆಯಲ್ಲಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಮುಖ್ಯಾಧಿಕಾರಿ ಚಂದ್ರ ಕುಮಾರ್, ಅಭಿಯಂತರ ಹೇಮ್ ಕುಮಾರ್, ಸದಸ್ಯರು ಉಪಸ್ಥಿತರಿದ್ದರು.