ಇಂದು ಉಪಗ್ರಹ ಉಡಾವಣೆ
ನವದೆಹಲಿ, ಫೆ. 13: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 2022ರ ವರ್ಷದ ಮೊದಲ ಉಡಾವಣಾ ಕಾರ್ಯಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಸೋಮವಾರ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಪಿ.ಎಸ್.ಎಲ್.ವಿ.-ಸಿ.52/ಇಒಎಸ್-04 ಮಿಷನ್ನ ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಫೆಬ್ರವರಿ 14 ರ ಬೆಳಿಗ್ಗೆ 5.55ಕ್ಕೆ ಪೆÇೀಲಾರ್ ಉಪಗ್ರಹ ಉಡಾವಣಾ ವಾಹನ, ಪಿಎಸ್ಎಲ್ವಿ-ಸಿ52 ಉಡಾವಣೆಗೆ ನಿಗದಿಯಾಗಿದೆ. ಈ ಕುರಿತಂತೆ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಇಸ್ರೋ, 2022ರ ಮೊದಲ ಉಪಗ್ರಹವನ್ನು ತಾ. 14ರ ಸೋಮವಾರ ನಡೆಯಲಿದೆ. 25 ಗಂಟೆ 30 ನಿಮಿಷಗಳ ಕೌಂಟ್ಡೌನ್ ಪ್ರಕ್ರಿಯೆ ಭಾನುವಾರ ಬೆಳಿಗ್ಗೆ 4.26ಕ್ಕೆ ಪ್ರಾರಂಭವಾಯಿತು ಎಂದು ತಿಳಿಸಿದೆ. 1710 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಅನ್ನು 526 ಕಿಲೋಮೀಟರ್ ದೂರದ ಸೂರ್ಯನ ಸಿಂಕ್ರೋನಸ್ ಧ್ರುವ ಕಕ್ಷೆಗೆ ಪರಿಭ್ರಮಿಸಲು ವಿನ್ಯಾಸಗೊಳಿಸಲಾದ ಪಿಎಸ್ಎಲ್ವಿ-ಸಿ52, ಎರಡು ಸಣ್ಣ ಉಪಗ್ರಹಗಳನ್ನು ಸಹ ಪ್ರಯಾಣಿಕರಾಗಿ ಸಾಗಿಸಲಿದೆ ಎಂದು ಇಸ್ರೋ ತಿಳಿಸಿದೆ. ಸಹ-ಪ್ರಯಾಣಿಕರಾಗಿ ಸಾಗಿಸಲಾಗುವ ಎರಡು ಉಪಗ್ರಹಗಳಲ್ಲಿ ಬೌಲ್ಡರ್ನ ಕೊಲೊರಾಡೋ ವಿಶ್ವವಿದ್ಯಾಲಯದ ವಾತಾವರಣ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ (ಐಐಎಸ್ಟಿ) ಐಎನ್ಎಸ್ ಪಿಐಆರ್ ಎಸ್ಯಾಟ್-1 ಎಂದು ಕರೆಯಲಾಗುವ ಒಂದು ವಿದ್ಯಾರ್ಥಿ ಉಪಗ್ರಹ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ತಂತ್ರಜ್ಞಾನ ಪ್ರದರ್ಶನಕಾರ ಉಪಗ್ರಹ (ಐಎನ್ಎಸ್-2ಟಿಡಿ) ಉಪಗ್ರಹ ಸೇರಿವೆ. ಐಎನ್ಎಸ್-2ಟಿಡಿ ಭಾರತ-ಭೂತಾನ್ ಜಂಟಿ ಉಪಗ್ರಹ (ಐಎನ್ಎಸ್-2ಬಿ)ಗೆ ಪೂರ್ವಗಾಮಿಯಾಗಿದೆ.
ಶಾಂತಿಯುತವಾಗಿ ಶಾಲೆ-ಕಾಲೇಜು ನಡೆಸುವುದು ಆದ್ಯತೆ
ಹುಬ್ಬಳ್ಳಿ, ಫೆ. 13: ರಾಜ್ಯದಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿ ಪ್ರೌಢಶಾಲೆ ತರಗತಿಗಳನ್ನು ಆರಂಭಿಸುತ್ತಿದ್ದೇವೆ, ಶಾಂತಿಯುತವಾಗಿ ತರಗತಿಗಳು ಆರಂಭವಾಗಿ ನಿರಾತಂಕವಾಗಿ ಸಾಗುವುದು ಮೊದಲಿನಂತೆ ಸೌಹಾರ್ದಯುತವಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ಬಂದು ಹೋಗುವುದು ನಮ್ಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರೌಢಶಾಲೆ ತರಗತಿಗಳು ಹೇಗೆ ನಡೆಯುತ್ತವೆ ಎಂದು ನೋಡಿಕೊಂಡು ಮುಂದೆ ಕಾಲೇಜುಗಳನ್ನು ಆರಂಭಿಸುತ್ತೇವೆ. ನಮ್ಮ ಅಧಿಕಾರಿಗಳು ಶಾಲೆಗಳ ಸುತ್ತಮುತ್ತ ತೀವ್ರ ಎಚ್ಚರಿಕೆ ವಹಿಸಲಿದ್ದಾರೆ. ಈಗಾಗಲೇ ಶಾಲಾ ಆಡಳಿತ ಮಂಡಳಿ, ಜಿಲ್ಲಾಧಿಕಾರಿಗಳಿಗೆ ಶಾಂತಿ ಸಭೆಗಳನ್ನು ನಡೆಸಲು ಸೂಚಿಸಿದ್ದೇನೆ ಎಂದರು. ಶಾಲೆಗಳು ಶಾಂತಿಯುತವಾಗಿ ಮೊದಲಿನಂತೆ ನಡೆಯುವುದು ನಮ್ಮ ಆದ್ಯತೆಯಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ, ಬಹಿರಂಗವಾಗಿ ಯಾರು ಕೂಡ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳುವಂತೆ ಹೇಳಿದ್ದೇನೆ ಎಂದರು. ಹೈಕೋರ್ಟ್ ಸೂಚನೆ ಮೇರೆಗೆ ತರಗತಿಗಳು ಆರಂಭವಾಗುತ್ತಿದೆ. ಸರ್ಕಾರ 9 ಹಾಗೂ 10ನೇ ತರಗತಿ ಆರಂಭಕ್ಕೆ ಸೂಚನೆ ನೀಡಿದೆ. ಶಾಲೆಗಳಿಗೆ ಹಿಜಾಬ್-ಕೇಸರಿ ಶಾಲಿಗೆ ಅನುಮತಿ ಇಲ್ಲ, ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುವಂತೆ ಸೂಚಿಸಿದೆ. ಫೆಬ್ರವರಿ 15ರಿಂದ ಪದವಿ ಕಾಲೇಜುಗಳ ತರಗತಿ ಆರಂಭಕ್ಕೆ ನಿರ್ಧಾರ ಮಾಡಿದೆ. ಸರ್ಕಾರವು ಶಾಲೆ ಆವರಣದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ನೀಡಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಲು ಸೂಚನೆ ನೀಡಿದೆ.
ಉಡುಪಿ : ಸೆಕ್ಷನ್ 144 ಜಾರಿ
ಉಡುಪಿ, ಫೆ. 13: ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಮರಕ್ಕೆ ಕಡಿವಾಣ ಹಾಕಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಎಲ್ಲಾ ಪ್ರೌಢ ಶಾಲಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಆದೇಶಿಸಿದ್ದಾರೆ. ಈ ಆದೇಶ ತಾ. 14 ಬೆಳಿಗ್ಗೆ 6 ಗಂಟೆಯಿಂದ ತಾ. 19 ರ ಸಂಜೆ 6 ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ. ಹಿಜಾಬ್ ವಿವಾದ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸದ್ಯ ಈಗ ರಾಜ್ಯದಲ್ಲಿ ನಾಳೆಯಿಂದ ಪ್ರೌಢಶಾಲೆ ಪುನಾರಂಭಗೊಳ್ಳಲಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ, ಪ್ರತಿಭಟನೆ, ಮೆರವಣಿಗೆ, ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ. ಯಾವುದೇ ವ್ಯಕ್ತಿ, ಜಾತಿ ಧರ್ಮದ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಡುಪಿ ಜಿಲ್ಲೆಯ ಮೂವರು ಉಪವಿಭಾಗಾಧಿಕಾರಿಗಳ ಮನವಿ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಡಿಸಿ ಕೂರ್ಮಾರಾವ್ ತಿಳಿಸಿದ್ದಾರೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಫೆಬ್ರವರಿ 11 ರಂದು ಡಿಸಿಗೆ ಪತ್ರ ಬರೆದು ಶಾಲಾ ಆವರಣದಲ್ಲಿ ಶಾಂತಿಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಿಷೇಧಾಜ್ಞೆ ಜಾರಿಗೊಳಿಸಬೇಕು ಎಂದು ತಿಳಿಸಿದ್ದರು.
ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು - ಮನೋಜ್ ಸಿನ್ಹಾ
ಜಮ್ಮು, ಫೆ. 13: ಕರ್ನಾಟಕದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರು ಇತರರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಮತ್ತು ಸಂವಿಧಾನವನ್ನು ಸರ್ವೋಚ್ಚ ಸ್ಥಾನದಲ್ಲಿಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹಿಜಾಬ್ ವಿವಾದದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿನ್ಹಾ, ನಾನು ಎರಡು ವಿಷಯಗಳ ಬಗ್ಗೆ ಮಾತನಾಡಬೇಕಾಗಿದೆ; ಒಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಮತ್ತು ಭಾರತೀಯ ಸಂವಿಧಾನವನ್ನು ಪರಮೋಚ್ಛವಾಗಿ ಪರಿಗಣಿಸಬೇಕು. ದೇಶದ ಪ್ರತಿಯೊಬ್ಬ ನಾಗರಿಕರು ಈ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಹಿಜಾಬ್ ವಿವಾದ ನ್ಯಾಯಾಲಯದಲ್ಲಿರುವುದರಿಂದ ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ. ಶ್ರೀನಗರದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಆಸಿಡ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾವು ಅವರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಹುಡುಗಿ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಹಿರಿಯ ಅಧಿಕಾರಿಯೊಬ್ಬರು ಸಹ ಅಲ್ಲಿದ್ದಾರೆ. ನಾನು ಅವರ ಆರೋಗ್ಯದ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ. ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ವರದಿಯ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಗವರ್ನರ್, ಭಾರತದ ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಮತ್ತು ಪಾರದರ್ಶಕ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ತಪ್ಪು ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ವಂಚಿಸುತ್ತಿದ್ದ ಮಾಜಿ ಸೈನಿಕನ ಬಂಧನ
ಬೆಂಗಳೂರು, ಫೆ. 13: ಸೇನಾಧಿಕಾರಿ ಎಂದು ನಂಬಿಸಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿವೇಕ್ ನಗರ ಪೆÇಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ನೆತೈಚಾಂದ್ ಜನಾ ಎಂದು ಗುರ್ತಿಸಲಾಗಿದೆ. ಸೇನೆಯಲ್ಲಿ ಕೆಲಸಕ್ಕೆ ಸೇರ ಬಯಸುತ್ತಿದ್ದ ಮತ್ತು ನಕಲಿ ನೇಮಕಾತಿ ನಡೆಸುತ್ತಿದ್ದ ಎಂದು ವಿವೇಕ್ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 1993ರಲ್ಲಿ ಸೇನೆ ಸೇರಿ ಸಿಪಾಯಿ ಆಗಿದ್ದ ನೆತೈ ಚಾಂದ್ 2009ರಲ್ಲಿ ಸೇನೆ ಬಿಟ್ಟಿದ್ದ. ಉದ್ಯೋಗಾಕಾಂಕ್ಷಿಗಳನ್ನು ಸೆಳೆಯಲು ಅನೇಕ ನಕಲಿ ಗುರುತಿನ ದಾಖಲೆಗಳನ್ನು ಸೃಷ್ಟಿಸಿದ್ದ. ಕಳೆದ ಒಂದು ವರ್ಷದಿಂದ ಆತನ ಮೇಲೆ ಮಿಲಿಟರಿ ಗುಪ್ತಚರ ವಿಭಾಗ ಕಣ್ಣಿಟ್ಟಿತ್ತು. ಬಂಧಿತನಿಂದ ಸೇನೆಯ ನಕಲಿ ಗುರುತಿನ ಚೀಟಿ, ಸೇನಾ ಸಮವಸ್ತ್ರದಲ್ಲಿನ ಆತನ ಭಾವಚಿತ್ರ ಮತ್ತು ಉದ್ಯೋಗಾಕಾಂಕ್ಷಿಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.