
ಸೋಮವಾರಪೇಟೆ, ಫೆ. 13: ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರ ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ. ಮಧ್ಯಾಹ್ನದ ಬಿಸಿಯೂಟದಿಂದ ಹಿಡಿದು ಉಚಿತ ಸಮವಸ್ತ್ರ, ಪಠ್ಯಪುಸ್ತಕಗಳನ್ನು ನೀಡುವುದರೊಂದಿಗೆ ಉಚಿತವಾಗಿ ಶಿಕ್ಷಣವನ್ನೂ ಒದಗಿಸುತ್ತಿದೆ. ಹೀಗಿದ್ದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದೆ.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ 29 ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಯನ್ನೂ ದಾಟಿಲ್ಲ. ಈ ನಡುವೆ 4 ಶಾಲೆಗಳಲ್ಲಿ ತಲಾ ಈರ್ವರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಗಳು ಮುಚ್ಚಿದರೂ ಆಶ್ಚರ್ಯಪಡುವಂತಿಲ್ಲ.
ಕೋವಿಡ್ ವೈರಸ್ ವ್ಯಾಪಕಗೊಂಡ ಸಂದರ್ಭ ಲಾಕ್‍ಡೌನ್ ಹೇರಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಮಂದಿ ಆರ್ಥಿಕವಾಗಿ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದರು. ಹಲವಷ್ಟು ಕುಟುಂಬಗಳು ಇಂದಿಗೂ ಸಂಕಷ್ಟದಿಂದ ಹೊರಬಂದಿಲ್ಲ. ಇದರ ಪರಿಣಾಮ ಸಾವಿರಾರು ರೂಪಾಯಿ ವ್ಯಯಿಸಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದ ಪೋಷಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಆರಂಭಿಸಿದರು.
ಇದರಿಂದಾಗಿ ಮತ್ತೆ ಸರ್ಕಾರಿ ಶಾಲೆಗಳು ತಮ್ಮ ದಾಖಲಾತಿ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಪ್ರಾಥಮಿಕ ಶಾಲೆಗಳ ಸ್ಥಿತಿಯಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಂಡುಬಂದಿಲ್ಲ. ಕೊರೊನಾ ಸಂದರ್ಭ ಸರ್ಕಾರಿ ಶಾಲೆಗೆ ಪ್ರವೇಶ ಪಡೆದಿದ್ದ ಕೆಲ ವಿದ್ಯಾರ್ಥಿಗಳು ನಂತರದ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ವಾಪಸ್ ಹೋಗಿದ್ದಾರೆ. 11ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ತಾಲೂಕಿನ ಈ 29 ಶಾಲೆಗಳ ಪೈಕಿ ಪ್ರಸಕ್ತ ವರ್ಷ 50 ವಿದ್ಯಾರ್ಥಿಗಳು ಮಾತ್ರ ಒಂದನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.
4 ಶಾಲೆಗಳಲ್ಲಿ ಕೇವಲ 2 ವಿದ್ಯಾರ್ಥಿಗಳು: ತಾಲೂಕಿನ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯ ಸಂಪಿಗೆದಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಜೂರು ಕ್ಲಸ್ಟರ್‍ನ ಬಿಳಿಗೇರಿ ಪ್ರಾಥಮಿಕ ಶಾಲೆ, ತಾಕೇರಿ, ಶಾಂತಳ್ಳಿ ಕ್ಲಸ್ಟರ್‍ನ ಹರಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಈರ್ವರು ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ.
ಇನ್ನು ಶನಿವಾರಸಂತೆ ಕ್ಲಸ್ಟರ್‍ನ ದೊಡ್ಡಕೊಳತ್ತೂರು ಹಾಗೂ ಸುಂಟಿಕೊಪ್ಪ ಕ್ಲಸ್ಟರ್‍ನ ಭೂತನಕಾಡು ಶಾಲೆಗಳಲ್ಲಿ ತಲಾ ಮೂವರು ವಿದ್ಯಾರ್ಥಿಗಳಿದ್ದಾರೆ. ಹಂಡ್ಲಿ ಕ್ಲಸ್ಟರ್‍ನ ಮೂದರವಳ್ಳಿ, ನಂಜರಾಯಪಟ್ಟಣದ ಕೂಡ್ಲೂರುಚೆಟ್ಟಳ್ಳಿ, ಶನಿವಾರಸಂತೆಯ ಬಿಳಹ, ಶಾಂತಳ್ಳಿಯ ಮಲ್ಲಿಕಾರ್ಜುನ ಶಾಲೆ, ಜಕ್ಕನಳ್ಳಿ ಹಾಗೂ ನಗರಳ್ಳಿ ಸರ್ಕಾರಿ ಶಾಲೆಗಳಲ್ಲಿ ತಲಾ ನಾಲ್ವರು ವಿದ್ಯಾರ್ಥಿಗಳು
(ಮೊದಲ ಪುಟದಿಂದ) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚಿಕ್ಕತೋಳೂರು ಸರ್ಕಾರಿ ಶಾಲೆ ಹಾಗೂ ಕೆದಕಲ್‍ನಲ್ಲಿ ಐವರು, ಕೊತ್ನಳ್ಳಿ ಹಾಗೂ ಪಟ್ಟಣದ ಬೇಳೂರು ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ 6 ವಿದ್ಯಾರ್ಥಿಗಳು, ಅರೆಯೂರು, ಕಣಗಾಲು, ಸೂರ್ಲಬ್ಬಿಯಲ್ಲಿ ತಲಾ 7, ಹಿತ್ತಲಕೇರಿ, ಹಂಪಾಪುರ, ಕೆಳಕೊಡ್ಲಿ, ಮೂವತ್ತೊಕ್ಲು, ತಲ್ತರೆಶೆಟ್ಟಳ್ಳಿ ಸರ್ಕಾರಿ ಶಾಲೆಗಳಲ್ಲಿ ತಲಾ 8 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಸುಂಟಿಕೊಪ್ಪ ಕ್ಲಸ್ಟರ್‍ನ ಮೋದೂರಿನಲ್ಲಿ 9, ಬೆಸೂರು ಕ್ಲಸ್ಟರ್‍ನ ಜನಾರ್ಧನಹಳ್ಳಿ, ನಿಲುವಾಗಿಲು, ಹೆಬ್ಬಾಲೆಯ ಮಣಜೂರು, ನಂಜರಾಯಪಟ್ಟಣದ ಅತ್ತೂರು ಸರ್ಕಾರಿ ಶಾಲೆಗಳಲ್ಲಿ ತಲಾ 10 ವಿದ್ಯಾರ್ಥಿಗಳಿದ್ದಾರೆ. ಇನ್ನು ಸಂಪಿಗೆದಾಳು, ಬಿಳಿಗೇರಿ, ತಾಕೇರಿ, ಹರಗ, ಬಿಳಹ, ಬೇಳೂರು ರಸ್ತೆ, ಸೂರ್ಲಬ್ಬಿ ಸರ್ಕಾರಿ ಶಾಲೆಗಳ ಒಂದನೇ ತರಗತಿಗೆ ಪ್ರಸಕ್ತ ವರ್ಷ ಯಾವುದೇ ದಾಖಲಾತಿಯಾಗಿಲ್ಲ. ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ 1 ಹಾಗೂ 9ನೇ ತರಗತಿಯಲ್ಲಿ 6 ವಿದ್ಯಾರ್ಥಿಗಳಿದ್ದಾರೆ. ಈ 6 ಮಂದಿ ಮುಂದಿನ ವರ್ಷ ಹತ್ತನೇ ತರಗತಿ ಮುಗಿಸಿದರೆ ಶಾಲೆಯಲ್ಲಿ ಕೇವಲ ಓರ್ವ ವಿದ್ಯಾರ್ಥಿ ಮಾತ್ರ ಉಳಿಯಬೇಕಾಗುತ್ತದೆ.
ತಾಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯಲ್ಲಿ ಈರ್ವರು ವಿದ್ಯಾರ್ಥಿಗಳಿದ್ದು, ಮುಂದಿನ ವರ್ಷ ಒಂದನೇ ತರಗತಿ ಸೇರಿದಂತೆ ಇತರ ತರಗತಿಗಳಿಗೆ ದಾಖಲಾತಿಯಾಗದಿದ್ದರೆ ಶಾಲೆ ಮುಚ್ಚುವ ಹಂತಕ್ಕೆ ತಲುಪಲಿದೆ. 11ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ 29 ಶಾಲೆಗಳಲ್ಲಿ ಪ್ರಸ್ತುತ 170 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇವುಗಳ ಪೈಕಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 16 ವಿದ್ಯಾರ್ಥಿಗಳು 5 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಬಿಳಿಗೇರಿ ಶಾಲೆಯಲ್ಲಿ 4 ಹಾಗೂ 5ನೇ ತರಗತಿಯಲ್ಲಿ ತಲಾ ಓರ್ವ ವಿದ್ಯಾರ್ಥಿಯಿದ್ದು, ಮುಂದಿನ ವರ್ಷಕ್ಕೆ ಓರ್ವ ವಿದ್ಯಾರ್ಥಿ ಮಾತ್ರ ಶಾಲೆಯಲ್ಲಿ ಉಳಿಯಲಿದ್ದಾನೆ. ತಾಲೂಕಿನ ಹಂಪಾಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷ 1ನೇ ತರಗತಿಗೆ 6 ವಿದ್ಯಾರ್ಥಿಗಳು ದಾಖಲಾಗಿದ್ದರೆ, ಜನಾರ್ಧನಹಳ್ಳಿಯಲ್ಲಿ 5, ಕೆದಕಲ್‍ನಲ್ಲಿ 4, ಕಣಗಾಲು, ಅತ್ತೂರು, ನಿಲುವಾಗಿಲು, ಹಿತ್ತಲಕೇರಿ, ಶಾಂತಳ್ಳಿ ಮಲ್ಲಿಕಾರ್ಜುನ ಮತ್ತು ದೊಡ್ಡಕೊಳತ್ತೂರು ಶಾಲೆಗಳಿಗೆ ತಲಾ ಮೂವರು ವಿದ್ಯಾರ್ಥಿಗಳು ಒಂದನೇ ತರಗತಿಗೆ ಪ್ರವೇಶಾತಿ ಪಡೆದಿದ್ದಾರೆ. 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಓರ್ವ ಶಿಕ್ಷಕರನ್ನು ಮಾತ್ರ ನಿಯೋಜಿಸಲಾಗಿದೆ.
ಒಟ್ಟಾರೆ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಉಳಿಯಬೇಕಾದರೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಮುಚ್ಚಿದರೆ ಮತ್ತೆ ಶಾಲೆಗಳನ್ನು ಪುನರ್ ಪ್ರಾರಂಭ ಮಾಡುವುದು ಕಷ್ಟಸಾಧ್ಯ. ಇದರೊಂದಿಗೆ ಶಿಕ್ಷಕರಿಗೂ ಸಮಸ್ಯೆಯಾಗಲಿದ್ದು, ಹೊಸದಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಬೇಕಿದೆ.
-ವಿಜಯ್ ಹಾನಗಲ್