ಸುಂಟಿಕೊಪ್ಪ, ಫೆ. 13: ರಸ್ತೆ ದಾಟುತ್ತಿದ್ದ ಸಂದರ್ಭ ಆಟೋ ಡಿಕ್ಕಿಯಾದ ಪರಿಣಾಮ ಬಾಲಕನೋರ್ವ ಸಾವನ್ನಪ್ಪಿದ ದುರ್ಘಟನೆ ಕೊಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಡಗರಹಳ್ಳಿಯ ಸ್ಕೂಲ್ ಬಾಣೆ ನಿವಾಸಿ ಅಝೀಸ್ ಹಾಗೂ ಮೈಮೂನ ದಂಪತಿ ಪುತ್ರ ಫಾಸಿಲ್ (7) ಅಪಘಾತದಿಂದ ಮೃತಪಟ್ಟ ಬಾಲಕ.

ಸಮೀಪದಲ್ಲಿ ಸ್ನೇಹಿತರೊಂದಿಗೆ ಆಟವಾಡಿ ಮನೆಗೆ ಹೋಗುತ್ತಿರುವಾಗ ರಸ್ತೆ ದಾಟುವ ಸಂದರ್ಭ ಸುಂಟಿಕೊಪ್ಪದಿಂದ ಕೊಡಗರಹಳ್ಳಿಗೆ ಬರುತ್ತಿದ್ದ ಅದೇ ಗ್ರಾಮದ ಕೆ.ಆರ್. ನವೀನ್ ಚಾಲನೆ ಮಾಡುತ್ತಿದ್ದ ಆಟೋರಿಕ್ಷಾ (ಕೆ.ಎ.12-ಬಿ,2253) ಡಿಕ್ಕಿಯಾದ ಪರಿಣಾಮ ಬಾಲಕ ಫಾಸಿಲ್ ಗಂಭಿರ ಗಾಯಗೊಂಡಿದ್ದಾನೆ.

ತಕ್ಷಣ ಸ್ಥಳೀಯರು ಬಾಲಕನನ್ನು ಚಿಕಿತ್ಸೆಗೆಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಅಸುನೀಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಹೇಳಲಾಗಿದೆ.