ವೀರಾಜಪೇಟೆ, ಫೆ. 13: ನಗರದ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಬಾರಿಯ ವಾರ್ಷಿಕ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೈಸೂರು ಧರ್ಮಾಧ್ಯಕ್ಷರಾದ ಡಾ. ಕೆ. ಎ. ವಿಲಿಯಂ ರವರು ಬಲಿಪೂಜೆಯನ್ನು ನೆರವೇರಿಸಿ ಪ್ರಾರ್ಥಿಸಿದರು. ಆ ಬಳಿಕ ಭಕ್ತಾದಿಗಳಿಗೆ ಶುಭವನ್ನು ಹಾರೈಸಿ ಹಬ್ಬದ ಸಂದೇಶ ಹಾಗೂ ಪ್ರವಚನವನ್ನು ನೀಡಿದರು.

ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸಲಿ ಹಾಗೂ ಸರ್ವರಿಗೂ ಭಗವಂತನು ಆರೋಗ್ಯವನ್ನು ಕರುಣಿಸಲಿ ಎಂದರು. ಪರಸ್ಪರ ಹೊಂದಾಣಿಕೆ, ಸಹಬಾಳ್ವೆಯನ್ನು ಹೊಂದಬೇಕು ಎಂದು ಕರೆ ನೀಡಿದರು.

ಹಬ್ಬದ ಪ್ರಯುಕ್ತ ಚರ್ಚನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಮೇಣದ ಬತ್ತಿಯನ್ನು ಬೆಳಗಿದರು. ಈ ವಾರ್ಷಿಕೋತ್ಸವಕ್ಕೆ ಕೊಡಗಿನ ಹಾಗೂ ಮೈಸೂರು ವಲಯದ ವಿವಿಧ ಧರ್ಮಗುರುಗಳು ಆಗಮಿಸಿದ್ದರು. ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ. ಫಾ. ಮದಲೈಮುತ್ತು ಹಾಗೂ ಸಹಾಯಕ ಧರ್ಮಗುರುಗಳಾದ ಫಾ. ಲಿಯೊನಾರ್ಡ್ ರವರು ಉಪಸ್ಥಿತರಿದ್ದರು.