ಶನಿವಾರಸಂತೆ, ಫೆ. 13: ಪಟ್ಟಣದ ರೋಟರಿ ಸಂಸ್ಥೆಗೆ ತಾ. 14 ರಂದು (ಇಂದು) ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ರೊಟೇರಿಯನ್ ಎ.ಆರ್. ರವೀಂದ್ರ ಭಟ್ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ 9.30ಕ್ಕೆ ರೋಟರಿ ಸಂಸ್ಥೆ ವತಿಯಿಂದ ಮುಳ್ಳೂರು ಜಂಕ್ಷನ್ ರಸ್ತೆ ತಿರುವುಗಳಲ್ಲಿ ಅಳವಡಿಸಿರುವ ಮಿರರ್, ಗೋಪಾಲಪುರದಲ್ಲಿ ಸ್ವಾಗತ ಕಮಾನು ಉದ್ಘಾಟಿಸಲಾಗುತ್ತದೆ. ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ಮತ್ತು ವಾಹನ ಚಾಲಕರ ಸಂಘದ ಸದಸ್ಯರಿಗೆ ಟಿ.ಟಿ. ಚುಚ್ಚುಮದ್ದು ಹಾಕಿಸುವ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ವಿಘ್ನೇಶ್ವರ ಬಾಲಕಿಯರ ಪಿಯು ಕಾಲೇಜಿನಲ್ಲಿ ರೋಟರಿ ಇಂಟರ್ ಆ್ಯಕ್ಟ್ ಕ್ಲಬ್ ವಿದ್ಯಾರ್ಥಿನಿಯರ ಜೊತೆ ಸಮಾಜ ಸೇವೆ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಮೀಪದ ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ಸಂಜೆ ನಡೆಯುವ ವಾರ್ಷಿಕ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಾಯಕ ರಾಜ್ಯಪಾಲ ರೊಟೇರಿಯನ್ ಎಚ್.ಟಿ. ಅನಿಲ್, ವಲಯ ಕಾರ್ಯದರ್ಶಿ ಎಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್ ಪಾಲ್ಗೊಳ್ಳುತ್ತಾರೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಪಿ. ಮೋಹನ್ ಹಾಗೂ ಕಾರ್ಯದರ್ಶಿ ಎಂ.ಎಸ್. ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.