ಸೋಮವಾರಪೇಟೆ, ಫೆ. 13: ಹಿಜಾಬ್ ಮತ್ತು ಕೇಸರಿ ವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ತಹಶೀಲ್ದಾರ್ ಗೋವಿಂದರಾಜು ಅವರು ಸೂಚಿಸಿದರು.

ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಮತ್ತು ಕುಶಾಲನಗರ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಪ್ರಾರಂಭವಾಗಿರುವ ಹಿಜಾಬ್ ಮತ್ತು ಕೇಸರಿ ವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದರಂತೆಯೇ ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲನೆ ಮಾಡಬೇಕು. ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಡಿವೈಎಸ್‍ಪಿ ಶೈಲೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಎಂ. ಮಹೇಶ್, ಪರಶಿವಮೂರ್ತಿ, ಬಿ.ಜಿ. ಮಹೇಶ್ ಅವರುಗಳು ಉಪಸ್ಥಿತರಿದ್ದರು.

ನಾಪೋಕ್ಲು

ಮಡಿಕೇರಿ ತಾಲೂಕಿನ ವಿವಿಧ ಪ್ರ್ರೌಢಶಾಲೆಗಳಲ್ಲಿ ಭಾನುವಾರ ಆಡಳಿತ ಮಂಡಳಿಯ ಸಭೆ ನಡೆಯಿತು. ಸೋಮವಾರದಿಂದ 9 ಮತ್ತು 10ನೇ ತರಗತಿಗಳು ಆರಂಭಗೊಳ್ಳಲಿದ್ದು, ಶಾಲೆಗಳಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಶಾಲೆ ನಡೆಸಲು ತೀರ್ಮಾನಿಸ ಲಾಯಿತು. ಹೈಕೋರ್ಟ್‍ನ ಆದೇಶವನ್ನು ಪಾಲಿಸಬೇಕು; ಶಾಲೆಗಳಲ್ಲಿ ಸಮವಸ್ತ್ರ ಬಳಸಿ ಶಿಸ್ತು ಕಾಪಾಡಬೇಕು ಎಂದು ಸೂಚಿಸಲಾಯಿತು. ವಿವಿಧ ಶಾಲೆಗಳಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಪಾಲ್ಗೊಂಡಿದ್ದರು.