ಮಡಿಕೇರಿ, ಫೆ. 12: ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಜನಪರ ಬಜೆಟ್‍ಗೆ ಎಸ್.ಡಿ.ಪಿ.ಐ ಆಗ್ರಹಿಸಿದೆ. ರಾಜ್ಯ ಸೇರಿದಂತೆ ಕೊಡಗು ಜಿಲ್ಲೆಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಜೆಟ್ ಸಹಕಾರಿಯಾಗಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಮುಸ್ತಫಾ ಒತ್ತಾಯಿಸಿದರು. ಜನಪರ ಬಜೆಟ್‍ಗೆ ಆಗ್ರಹಿಸಿ ಹಕ್ಕೊತ್ತಾಯಗಳನ್ನೊಳಗೊಂಡ ಮನವಿಯನ್ನು ರಾಜ್ಯದ ಎಲ್ಲಾ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಲ್ಲಿಸಲಾಗಿದೆ ಎಂದು ಮುಸ್ತಫಾ ಅವರು ಮಾಹಿತಿ ನೀಡಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿದ ಬಜೆಟ್‍ನಲ್ಲಿ ಹಲವು ನಿರೀಕ್ಷೆಗಳಿದ್ದವು. ಮುಖ್ಯವಾಗಿ ಇಂಧನ ದರ ಇಳಿಕೆಯಾಗಬಹುದೆಂಬ ಆಶ್ವಾಸನೆ ಇತ್ತು. ಆದರೆ ಅದು ಹುಸಿಯಾಗಿದೆ. ರಾಜ್ಯ ಬಜೆಟ್‍ನಲ್ಲಾದರೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರ ಜನಪರ ಬಜೆಟ್ ಮಂಡಿಸಿ ಹಿಂದುಳಿದವರ, ಅಲ್ಪಸಂಖ್ಯಾತರ, ಆರ್ಥಿಕವಾಗಿ ಸಬಲರಲ್ಲದವರ ಏಳಿಗೆಗೆ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ಬಜೆಟ್ ಮಂಡನೆ ಬಳಿಕ, ಘೋಷಣೆಯಾದ ಯೋಜನೆಗಳ ಅನುಷ್ಠಾನಕ್ಕೆ ಸರಕಾರ ಗಮನಹಿರಿಸಬೇಕೆಂದರು. ಇದೇ ಸಂದರ್ಭ ಹಕ್ಕೊತ್ತಾಯಗಳನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಮನ್ಸೂರ್ ಮಾತನಾಡಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕನಿಷ್ಟ ರೂ.10 ಸಾವಿರ ಕೋಟಿ ಮೀಸಲಿಡಬೇಕು. ಉರ್ದು ಭಾಷೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಉರ್ದು ವಿಶ್ವವಿದ್ಯಾನಿಲಯ ಪ್ರಾರಂಭಿಸಬೇಕು. ಆದಿವಾಸಿ. ಅಲೆಮಾರಿ, ಬುಡಕಟ್ಟು ಸೇರಿದಂತೆ ರಾಜ್ಯದಲ್ಲಿ ಗುರುತಿಸಲ್ಪಟ್ಟ ಸುಮಾರು 47 ಸಣ್ಣ ಸಮುದಾಯಗಳ ಹಿತರಕ್ಷಣೆಗೆ ಆದ್ಯತೆ ನೀಡಬೇಕು. ರಾಜ್ಯಾದ್ಯಂತ ಕುಡಿಯುವ ನೀರಿನ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸಬೇಕು. ಒಟ್ಟಿನಲ್ಲಿ ಬಡ ಮತ್ತು ಮಧ್ಯಮ ವರ್ಗದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವಂತಹ ಯೋಜನೆಗಳನ್ನು ತಯಾರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತದ್ರ ಎಸ್.ಡಿ.ಪಿ.ಐ ಸಮಿತಿ ಅಧ್ಯಕ್ಷ ಉಸ್ಮಾನ್ ಅವರು ಮಾತನಾಡಿ ಅಲ್ಪಸಂಖ್ಯಾತರ ಏಳಿಗೆಗಾಗಿ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ರಾಜೇಂದ್ರ ಪ್ರಸಾದ್ ಹಾಗೂ ಜಸ್ಟೀಸ್ ರಂಗನಾಥ್ ಮಿಶ್ರ ವರದಿ ಜಾರಿಗೆ ತರಬೇಕು. ಕೊಡಗಿನ ರಸ್ತೆಗಳ ದುರಸ್ತಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಶೀರ್ ಅಹ್ಮದ್, ನಗರ ಸಮಿತಿ ಸದಸ್ಯರಾದ ಮೂಸ ಹಾಗೂ ಕೈಸಾರ್ ಹಾಜರಿದ್ದರು.