ಮಡಿಕೇರಿ, ಫೆ. 12: ಕೇಂದ್ರ ಸರಕಾರದ ವಿತ್ತ ಸಚಿವೆ ಇತ್ತೀಚೆಗೆ ಮಂಡಿಸಿದ ಬಜೆಟ್ ದೇಶದ ದೂರದೃಷ್ಟಿಯನ್ನು ಗಮನದಲ್ಲಿರಿಸಿ ಮಂಡಿಸಿದ ಬಜೆಟ್ ಆಗಿದೆ. ಬಜೆಟ್ ಮಂಡನೆ ವೇಳೆ ಕೆಲವು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದರೂ ಸಹ ಕೇವಲ ಚುನಾವಣೆಗೆ ಪೂರಕವಾಗದೆ, ದೇಶದ ಅಭಿವೃದ್ಧಿಗಾಗಿ ಬಜೆಟ್ ಮಂಡನೆಯಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೂ.39.45 ಲಕ್ಷ ಕೋಟಿಯ ಬೃಹತ್ ಬಜೆಟ್ ಹಿಂದುಳಿದ ವರ್ಗದವರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಲವಷ್ಟು ಯೋಜನೆಗಳೊಂದಿಗೆ ದೇಶದಾದ್ಯಂತ ಸುಮಾರು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಉದ್ಯೋಗಾವಕಾಶ ಕೇವಲ ಸರಕಾರಿ ಮಟ್ಟದಲ್ಲಿ ಮಾತ್ರ ಅಲ್ಲ. ಬದಲಿಗೆ ‘ಸ್ಟಾರ್ಟ್‍ಅಪ್ಸ್’ (ನೂತನ ಸಂಸ್ಥೆಗಳು) ಗಳಿಗೆ ಪ್ರೋತ್ಸಾಹ, ಉತ್ತೇಜನ ನೀಡುವುದರೊಂದಿಗೆ ಖಾಸಗಿಯಾಗಿ ದೊರಕುವ ಉದ್ಯೋಗವಕಾಶಗಳನ್ನು ಹೆಚ್ಚಿಸಿದೆ ಎಂದರು. ಈ ಬಜೆಟ್‍ಅನ್ನು ದೇಶ ಹಾಗೂ ವಿದೇಶದ ಬಹಳಷ್ಟು ಆರ್ಥಿಕ ತಜ್ಞರು ಕೂಡ ಸ್ವಾಗತಿಸಿದ್ದು, ಉತ್ತಮ ಬಜೆಟ್ ಎಂಬುದಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಇದರಲ್ಲಿ ಕೊಡಗಿನ ಕಾಫಿ ಬೆಳೆಗಾರರಿಗೆ 10 ಹೆಚ್.ಪಿವರೆಗಿನ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ಕಲ್ಪಿಸುವ ಸಂಬಂಧ, ಜಿಲ್ಲೆಯ ಪ್ರಮುಖ ಜನಾಂಗವಾಗಿರುವ ಕೊಡವ ಜನಾಂಗದ ಏಳಿಗೆಗಾಗಿ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪನೆಯ ಬಗ್ಗೆ, ಕ್ರೀಡಾ ವಿಶ್ವವಿದ್ಯಾನಿಲಯ, ಹೈ-ಟೆಕ್ ಆಸ್ಪತ್ರೆ ಸ್ಥಾಪನೆ ಹಾಗೂ ನೂತನವಾಗಿ ಘೋಷಿಸಲಾಗಿರುವ ಕುಶಾಲನಗರ - ಪೊನ್ನಂಪೇಟೆ ತಾಲೂಕುಗಳಿಗೆ ಮಿನಿ ವಿಧಾನ ಸೌಧಗಳನ್ನು ನಿರ್ಮಿಸುವ ಸಂಬಂಧ ಸರಕಾರದ ಗಮನಕ್ಕೆ ತರಲಾಗಿದ್ದು, ರಾಜ್ಯ ಬಜೆಟ್‍ನಲ್ಲಿ ಈ ಮನವಿಗಳಿಗೆ ಸ್ಪಂದನ ದೊರಕುವ ನಿರೀಕ್ಷೆಯಿದೆ ಎಂದು ಹೇಳಿದರು.

ಬಿ.ಜೆ.ಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕೇಂದ್ರ ಸರಕಾರದ ಬಜೆಟ್ ಆತ್ಮನಿರ್ಭರತೆಗೆ ಹೆಚ್ಚು ಒತ್ತು ನೀಡಿದ್ದು, ರಕ್ಷಣಾ ವಲಯದ ಶೇ.68 ಪರಿಕರಗಳನ್ನು ದೇಶದಲ್ಲೇ ಉತ್ಪಾದಿಸುವಂತೆ ಕ್ರಮ ವಹಿಸಿದೆ. ಈ ಮೂಲಕ ಸ್ಥಳೀಯ ಕೈಗಾರಿಕೆಗಳಿಗೆ ರಕ್ಷಣಾ ಪರಿಕರಗಳ ಉತ್ಪಾದನೆ ಮಾಡುವ ಅವಕಾಶ ಕಲ್ಪಿಸುವುದರೊಂದಿಗೆ ಆಮದು ಮೊತ್ತವನ್ನು ಕಡಿತಗೊಳಿಸಿ ಆತ್ಮನಿರ್ಭರತೆಗೆ ವಿಶೇಷ ಆಸಕ್ತಿ ನೀಡಿದಂತಾಗಿದೆ ಎಂದು ಹೇಳಿದರು.

ಪಿ.ಎಮ್ ಗತಿಶಕ್ತಿ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಸೇರಿದಂತೆ ಇತರ ವಲಯಗಳಿಗೂ ಅತ್ಯುತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಕೃಷಿ ಆಧುನಿಕತೆ, ದೇಶದ ಕೆಲವು ನದಿಗಳ ಜೋಡಣೆ, ಶಿಕ್ಷಣ ಹಾಗೂ ರಕ್ಷಣಾ ವಲಯಗಳಿಗೆ ಒತ್ತು ನೀಡಲಾಗಿದೆ. ಅಂಗನವಾಡಿಗಳ ಅಭಿವೃದ್ಧಿ, ‘ಸ್ಟಾರ್ಟ್‍ಅಪ್’ಗಳಿಗೆ ಉತ್ತೇಜನೆ ಸೇರಿದಂತೆ ವಿಶ್ವವನ್ನೇ ಕಾಡುತ್ತಿರುವ ಪರಿಸರ ಮಾಲಿನ್ಯದ ತಡೆಗೆ ಪೂರಕವಾಗಿರುವಂತಹ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ ನೀಡಲಾಗಿದ್ದು, ಮುಂದಿನ 25 ವರ್ಷಗಳ ದೂರದೃಷ್ಟಿಯೊಂದಿಗೆ ಬಜೆಟ್ ಮಂಡನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಭಾರತೀಶ್ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕನಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನನಸ್ಸು ಮಾಡಿದ್ದಾರೆ. ದೇಶವು ಆರ್ಥಿಕವಾಗಿ ಸಬಲೀಕರಣವಾಗಲು ಬಜೆಟ್ ಉಪಕಾರಿಯಾಗಲಿದೆ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿ.ಜೆ.ಪಿ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಹಾಜರಿದ್ದರು.