ಶನಿವಾರಸಂತೆ, ಫೆ. 13: ಕೆ.ಪಿ.ಎಸ್. ಶಾಲೆಗಳಲ್ಲಿ ಆ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿಸಿ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿರುವುದು ಖಂಡನೀಯ ಎಂದು ಕೊಡ್ಲಿಪೇಟೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಎ. ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಪ್ರಾರಂಭಿಸಿರುವ ಕೆ.ಪಿ.ಎಸ್. ಶಾಲೆಗಳಲ್ಲಿ ಈ ಹಿಂದೆ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ನಿಯಮಗಳ ಅನ್ವಯ ಪಾಲಕರಿಂದ ಆಯ್ಕೆಯಾದ ಪೋಷಕ ಪ್ರತಿನಿಧಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ 2021 ಅ. 26 ರ ಸರಕಾರಿ ಆದೇಶದಲ್ಲಿ ತಿಳಿಸಲಾಗಿತ್ತು. ಇದು ಕಾಯ್ದೆ, ನಿಯಮ, ಸುತ್ತೋಲೆಗಳ ಅನ್ವಯ ಸರಿಯಾದ ಕ್ರಮಬದ್ಧ ತೀರ್ಮಾನವಾಗಿದ್ದು, ಕ್ಷೇತ್ರದ ಶಾಸಕರು ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಇರುವಂತೆ ಸೂಚಿಸಲಾಗಿತ್ತು ಎಂದರು.
ಇದಾದ ನಂತರ ಪ್ರತಿ ಕೆ.ಪಿ.ಎಸ್. ಶಾಲೆಗಳ ಅಭಿವೃದ್ಧಿಗಾಗಿ ರೂ. 2 ಕೋಟಿ ಮಂಜೂರಾದ ತಕ್ಷಣ ಶಾಸಕರು ಸರಕಾರದ ಮೇಲೆ ಒತ್ತಡ ಹಾಕಿ ಹಿಂದಿನ ತೀರ್ಮಾನವನ್ನು ಅಸಿಂಧುಗೊಳಿಸಿ ಶಾಸಕರೇ ಅಧ್ಯಕ್ಷರಾಗಬೇಕೆಂಬ ತಿದ್ದುಪಡಿ ಆದೇಶವನ್ನು ಸರಕಾರ 2022 ರ ಜ. 31 ರಂದು ಹೊರಡಿಸುವಂತೆ ಮಾಡಿದ್ದಾರೆ. ಇದು ಖಂಡನೀಯ. ಈ ಆದೇಶ ಪಕ್ಷ ರಾಜಕಾರಣಕ್ಕೆ ಎಡೆಕೊಟ್ಟು ಎಸ್.ಡಿ.ಎಂ.ಸಿ. ರಚನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.