ಮಡಿಕೇರಿ, ಫೆ. 13: ನಗರದ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಮಕ್ಕಳ ಆಟದ ಮೈದಾನವನ್ನು ಯಾವ ಸಂಸ್ಥೆಗಳಿಗಾಗಲೀ ಅಥವಾ ಇಲಾಖೆಗಳಿಗಾಗಲೀ ಹಸ್ತಾಂತರಿಸದೆ ಪ್ರಸ್ತುತ ಈಗಿರುವಂತೆಯೇ ಆಟದ ಬಯಲಾಗಿಯೇ ಮುಂದುವರೆಸಿಕೊಂಡು ಹೋಗುವಂತಾಗಬೇಕೆಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯ ಕಾರ್ಯಕಾರಿ ಸಮಿತಿಯವರು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಸಮಿತಿಯ ಅಧ್ಯಕ್ಷ ಎಂ.ಎ. ಸಾಧು, ಗೌರವ ಅಧ್ಯಕ್ಷ ಎಂ.ಎ. ನಜೀರ್ ಹಾಗೂ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಇವರುಗಳು ಮೈದಾನಕ್ಕಾಗಿ ಕಾಯ್ದಿರಿಸಿ ಈಗ ಮೈದಾನ ನಿರ್ಮಾಣಗೊಂಡು ಕ್ರೀಡಾಚಟುವಟಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಮೈದಾನವನ್ನು ಬೇರೆ ಬೇರೆ ಇಲಾಖೆಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡುವುದನ್ನು ವಿರೋಧಿಸಿದ್ದಾರೆ.
ಇಲ್ಲಿ ಸುಮಾರು 300 ಮನೆಗಳಿದ್ದು, ಸಾವಿರಾರು ನಿವಾಸಿಗಳು ವಾಸಿಸುತ್ತಿದ್ದಾರೆ. ಮಕ್ಕಳಿಗೆ ಇಲ್ಲಿ ನಿರ್ಮಾಣಗೊಂಡ ಆಟದ ಮೈದಾನ ಆರೋಗ್ಯಕರ ಚಟುವಟಿಕೆಗಳಿಗೆ ಅವಶ್ಯವೆನಿಸಿದೆ. ಇದೀಗ ನಗರಾಭಿವೃದ್ಧಿ ಪ್ರಾಧಿಕಾರದವರು ಈ ಆಟದ ಮೈದಾನವನ್ನು ಬೇರೆ ಬೇರೆ ಇಲಾಖೆಗಳಿಗೆ ಮಂಜೂರು ಮಾಡುವ ಪ್ರಯತ್ನ ನಡೆಸುತ್ತಿದೆ. ಮೂಡಾದವರ ಈ ಕ್ರಮವನ್ನು ಕೈಬಿಟ್ಟು ಆಟದ ಬಲಯನ್ನು ಯಥಾಸ್ಥಿತಿಯಲ್ಲಿಯೇ ಮುಂದುವರೆಸಿ ಇಲ್ಲಿನ ನಿವಾಸಿಗಳಿಗೆ ಮೈದಾನದ ಅವಶ್ಯಕತೆಯನ್ನು ಹೊಂದಿಸಿಕೊಂಡು ಹೋಗುವಂತೆ ಏರ್ಪಡಿಸುವಂತಾಗಬೇಕೆಂದು ಸಮಿತಿಯವರು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.