ಮಡಿಕೇರಿ/ ಕುಶಾಲನಗರ, ಫೆ. 13: ಇತ್ತೀಚೆಗೆ ಕುಶಾಲನಗರದ ಅಲ್ಪಸಂಖ್ಯಾತ ಹಾಸ್ಟೆಲ್ನಲ್ಲಿ ವಿಷ ಸೇವಿಸಿದ್ದ ವಿದ್ಯಾರ್ಥಿಯೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಲಾಗಿದೆ. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರ ಪ್ರಕಾರ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನವಾಗಿ ಗುಣಮುಖನಾಗುತ್ತಿರುವುದಾಗಿ ತಿಳಿದು ಬಂದಿದೆ.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಜ್ವಲ್ ಅಂತೋಣಿ ಹಾಗೂ ಅಬ್ದುಲ್ ರಾಶಿತ್ ಎಂಬ ಇಬ್ಬರು ವಿದ್ಯಾರ್ಥಿಗಳು ಹಾಗೂ ಬೆಂಬಲಿಗ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಮರುದಿನ ವಿಷಯ ತಿಳಿದ ಕುಶಾಲನಗರ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ ಸಂದರ್ಭ ಈ ಇಬ್ಬರು ವಿದ್ಯಾರ್ಥಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಲು ಪ್ರೇಮ ಪ್ರಕರಣವೊಂದು ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಆದರೆ, ಎಲ್ಲಾ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಬೇಕೆನ್ನುವಾಗ ಅನೇಕರು ಹಾಸ್ಟೆಲ್ನಿಂದ ತಮ್ಮ ಮನೆಗಳಿಗೆ ತೆರಳಿದ್ದು, ಅವರುಗಳು ಮರಳಿದ ಬಳಿಕ ಪೂರ್ಣ ವಿಚಾರಣೆ ನಡೆಸಲಿರುವುದಾಗಿ ತಿಳಿದು ಬಂದಿದೆ.
ಈ ಹಲ್ಲೆಯಲ್ಲಿ ಹೊರಗಿನ ಕೆಲವು ವ್ಯಕ್ತಿಗಳೂ ಭಾಗಿಯಾಗಿದ್ದರು. ಅದಾದ ಬಳಿಕ ಪ್ರಜ್ವಲ್ ಅಂತೋಣಿ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿ ಬಳಿಕ ವಿಷ ಸೇವಿಸಿದ್ದು, ಹುಡುಕಾಟ ನಡೆಸಿದ ಸ್ನೇಹಿತರು ಕುಶಾಲನಗರದ ಐಬಿ ಬಳಿ ನಡೆದುಕೊಂಡು ಹೋಗುತಿದ್ದ ಪ್ರಜ್ವಲ್ ಅಂತೋಣಿಯನ್ನು ಪತ್ತೆಹಚ್ಚಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ. ಹಲ್ಲೆ ಪ್ರಕರಣ ಸಂಬಂಧ ಪ್ರಜ್ವಲ್ ಅಂತೋಣಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ ಕಾರಣದ ಬಗ್ಗೆ ಹೀಗೆ ತಿಳಿಸಿದ್ದಾನೆ. ‘ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಿಜಾಬ್ ವಿವಾದ ಸನ್ನಿವೇಶ ತಾನು ಕೇಸರಿ ಶಲ್ಯ ಧರಿಸಿದ್ದು ಆ ದಿನ ಹಾಸ್ಟೆಲ್ಗೆ ಮರಳಿದಾಗ ಅನ್ಯಕೋಮಿನವರು ಇದನ್ನೇ ನೆಪವಾಗಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಈ ಘಟನೆ ಬಳಿಕ ಹಾಸ್ಟೆಲ್ನಲ್ಲಿ ಇತರ ವಿದ್ಯಾರ್ಥಿಗಳು ನನ್ನನ್ನು ದೂರ ಮಾಡುತ್ತಿದ್ದಾರೆ. ಹಾಸ್ಟೆಲ್ ವಾರ್ಡನ್ ಕೂಡ ನನ್ನನ್ನು ಅಪರಾಧಿ ಎಂಬಂತೆ ಪರಿಗಣಿಸಿ ನಿನ್ನಿಂದ ಹಾಸ್ಟೆಲ್ಗೆ ಕಳಂಕ ಉಂಟಾಗಿದೆ ಎಂದು ಮೂದಲಿಸಿದ್ದಾರೆ. ಇದರಿಂದ ತಾನು ಮನನೊಂದು ಈ ನಿರ್ಧಾರ ತೆಗೆದುಕೊಂಡೆ. ಎಂದು ಆತ ನೊಂದು ನುಡಿದಿದ್ದಾನೆ.
ಸಂಘಟನೆಗಳ ಖಂಡನೆ
ಈ ನಡುವೆ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಶಾಫಿ ಸ ಅದಿ, ಜಿಲ್ಲೆಯಲ್ಲಿ ನಾವುಗಳು ಶಾಂತಿ ಸೌಹಾರ್ದತೆಯಿಂದ ಇರುವ ವೇಳೆ ಕೆಲವು ಕಿಡಿಗೇಡಿಗಳು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷ ಬೀಜ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳ ನಡುವೆ ನಡೆದ ಸಣ್ಣ ಗಲಾಟೆಗೆ ಕೆಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಹಾಸ್ಟೆಲ್ಗೆ ನುಗ್ಗಿ ಮುಸ್ಲಿಂ ಯುವಕನನ್ನು ಹಲ್ಲೆಗೈದಿರುವುದು ಅತ್ಯಂತ ಖಂಡನೀಯವಾಗಿದೆ. ಇದರ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಕ್ರಮಕ್ಕೆ ಕೈಗೊಳ್ಳುವ ಬಗ್ಗೆ ವರಿಷ್ಠಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಕುಶಾಲನಗರ ಮುಸ್ಲಿಂ ಒಕ್ಕೂಟದ ಪ್ರಮುಖರಾದ ಕರೀಂ ಮಾತನಾಡಿ, ಓರ್ವ ಅಮಾಯಕ ವಿದ್ಯಾರ್ಥಿ ಮೇಲೆ ಗುಂಪು ಸೇರಿ ಹಲ್ಲೆ ನಡೆಸಿದ್ದಾರೆ. ಆದರೆ ಇದರ ಬಗ್ಗೆ ಪೆÇಲೀಸ್ ಇಲಾಖೆ ದುರ್ಬಲ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ರಾಶಿತ್ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾವೆ. ಕತ್ತು, ಬೆನ್ನು ಹಾಗೂ ತೊಡೆ ಭಾಗದಲ್ಲಿ ತೀವ್ರವಾಗಿ ಪೆಟ್ಟಾಗಿದೆ. ಈವರೆಗೆ ಯಾವ ಪೆÇಲೀಸರೂ ಆಗಮಿಸಲಿಲ್ಲ ಎಂದು ಎಸ್.ಎಸ್.ಎಫ್ ನ ಪ್ರಮುಖರಾದ ಕೈಜರ್ ಆರೋಪಿಸಿದ್ದಾರೆ.