ಗೋಣಿಕೊಪ್ಪಲು, ಫೆ. 12: ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವು ದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು.

ಅಮ್ಮತ್ತಿಯ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವಾಲಯ ಸಮಿತಿಯು ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಿಸಿ ಕ್ಯಾಮರಾ ಅಳವಡಿಸಿದೆ. ಕೊರೊನಾ ಸಂದರ್ಭ ಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದೆ. ಅಲ್ಲದೆ ಅನೇಕ ಜನೋಪಕಾರಿ ಸಮಾಜಸೇವಾ ಕೆಲಸವನ್ನು ಮಾಡಿದೆ ಹೀಗಾಗಿ ಗ್ರಾಮದ ಅಭಿವೃದ್ಧಿಗೆ ದೇವಾಲಯ ಸಮಿತಿಯ ಕೊಡುಗೆ ಸಾಕಷ್ಟು ಇದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಮಾಚಿಮಂಡ ಮಧು ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷ ಪ್ರಿನ್ಸ್ ಗಣಪತಿ ಮಾತನಾಡಿ, ದೇವಾಲಯ ಸಮಿತಿಗೆ ಊರಿನ ಹಿರಿಯರು ಜಾಗವನ್ನು ಉಳಿಸಿ ಕೊಟ್ಟಿದ್ದರು. ಈ ಜಾಗದಲ್ಲಿ ಇದೀಗ ಮೂವತ್ತು ಲಕ್ಷದ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ ಎಂದರು.

ವೇದಿಕೆಯಲ್ಲಿ ದೇವಾಲಯ ಸಮಿತಿಯ ಖಜಾಂಚಿ ಮಾಚಿಮಂಡ ಜಯ ಉತ್ತಪ್ಪ, ಅಮ್ಮತ್ತಿ ವರ್ತಕರ ಸಂಘದ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ, ಮಾಜಿ ಜಿ.ಪಂ. ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಡಿಸಿಸಿ ಬ್ಯಾಂಕ್ ಸದಸ್ಯ ಪಟ್ರಪಂಡ ರಘು ನಾಣಯ್ಯ, ರೈತ ಸಂಘದ ಕಾವಡಿಚಂಡ ಗಣಪತಿ, ನೆಲ್ಲಮಕ್ಕಡ ವಿವೇಕ್, ಕೇಚಂಡ ಕುಶಾಲಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ದೇವಾಲಯ ಸಮಿತಿಯ ಜಂಟಿ ಕಾರ್ಯದರ್ಶಿ ಮುಕ್ಕಾಟಿರ ಬೋಪಣ್ಣ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರನ್ನು ದೇವಾಲಯ ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.