ಸೋಮವಾರಪೇಟೆ, ಫೆ. 12: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದಲ್ಲಿ ಸರ್ಕಾರಿ ಕಡಂಗ ಜಾಗ ಒತ್ತುವರಿಯನ್ನು ಕಂದಾಯ ಇಲಾಖೆ ಮೂಲಕ ತೆರವುಗೊಳಿಸಿದ್ದರೂ ಮತ್ತೆ ಒತ್ತುವರಿ ಮಾಡುವ ಯತ್ನ ನಡೆಯುತ್ತಿದ್ದು, ಈ ಬಗ್ಗೆ ನ್ಯಾಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯರಾದ ಲೋಕೇಶ್ (ರವಿ) ಅವರು, ಸರ್ಕಾರಿ ದಾಖಲೆಯ ಪ್ರಕಾರ ಬಳಗುಂದ ಗ್ರಾಮದಲ್ಲಿ ಕಡಂಗ ಜಾಗವಿದ್ದು, ರೈತರು ಈ ದಾರಿಯ ಮೂಲಕ ತಮ್ಮ ಗದ್ದೆ ತೋಟಗಳಿಗೆ ತೆರಳುತ್ತಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಈ ಜಾಗಕ್ಕೆ ಪ್ರಭಾವಿ ರಾಜಕಾರಣಿಯೋರ್ವರು ಬೇಲಿ ನಿರ್ಮಿಸಿ ತಡೆಯೊಡ್ಡಿದ್ದರಿಂದ ಸಮಸ್ಯೆ ಉಂಟಾಗಿತ್ತು ಎಂದರು.

ಈ ಬಗ್ಗೆ ತಹಶೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಕಳೆದ ಜನವರಿ 13 ರಂದು ಸರ್ವೆ, ಕಂದಾಯ, ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿತ್ತು. ಈ ಸಂದರ್ಭ ಸ್ಥಳೀಯರು ಕಡಂಗ ಜಾಗದ ಅಕ್ಕಪಕ್ಕವಿರುವ ತಾರಾ ಮಂಜು ಅವರಿಗೆ ಸೇರಿದ ತೋಟಗಳಿಗೆ ಜಾನುವಾರು ನುಗ್ಗದಂತೆ ಬೇಲಿ ನಿರ್ಮಿಸಿದ್ದರು. ಇದೀಗ ಈ ಬೇಲಿಯನ್ನು ಕಿತ್ತು ಮತ್ತೊಮ್ಮೆ ಜಾಗ ಒತ್ತುವರಿ ಮಾಡಿಕೊಳ್ಳಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಕಡಂಗ ಜಾಗದ ಮೂಲಕವೇ ನಮ್ಮ ತೋಟ ಗದ್ದೆಗಳಿಗೆ ತೆರಳಬೇಕಿದೆ. ಈ ಜಾಗಕ್ಕೆ ಬೇಲಿ ನಿರ್ಮಿಸಿದರೆ ಸಮಸ್ಯೆಯಾಗಲಿದೆ. ನೂರಾರು ಏಕರೆ ತೋಟ ಹೊಂದಿರುವ ಪ್ರಭಾವಿಗಳು ಮೂರು ಏಕರೆ ತೋಟ ಹೊಂದಿರುವ ನಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಕಂದಾಯ ಇಲಾಖೆಯ ಮೂಲಕವೇ ತೆರವುಗೊಂಡಿರುವ ಕಡಂಗ ಜಾಗವನ್ನು ಹಾಗೆಯೇ ಉಳಿಸಬೇಕು. ಒಂದುವೇಳೆ ಬೇಲಿಹಾಕಿ ತಡೆಯೊಡ್ಡಲು ಮುಂದಾದರೆ ರೈತ ಸಂಘದ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಲೋಕೇಶ್ ಹೇಳಿದರು.

ಗೋಷ್ಠಿಯಲ್ಲಿ ಸ್ಥಳೀಯರಾದ ಚೈತ್ರ, ಭಾಗ್ಯವತಿ, ಲೋಕೇಶ್ವರಿ, ಶ್ರೀನಿವಾಸ್‍ಮೂರ್ತಿ ಅವರುಗಳು ಉಪಸ್ಥಿತರಿದ್ದರು.