ಸೋಮವಾರಪೇಟೆ, ಫೆ.12: ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಆವರಣದಲ್ಲಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ರಾಜ್ಯ ಸಂಘದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಶಾಸಕರೂ ಆಗಿರುವ ಸಿ.ಎನ್. ಬಾಲಕೃಷ್ಣ ಅವರು ಭರವಸೆ ನೀಡಿದರು.
ಇಲ್ಲಿನ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೋಮವಾರಪೇಟೆ ಭಾಗದಲ್ಲಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ಸ್ಥಾಪಿಸುವ ಬೇಡಿಕೆಯನ್ನು ತಾಲೂಕು ಒಕ್ಕಲಿಗರ ಸಂಘವು ಮುಂದಿಟ್ಟಿದ್ದು, ಇದನ್ನು ಆದ್ಯತೆಯ ಮೇರೆ ಪರಿಗಣಿಸಿ, ರಾಜ್ಯ ಸಂಘದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗು ವುದು ಎಂದರು.
(ಮೊದಲ ಪುಟದಿಂದ)
ಸಮುದಾಯ ಬಾಂಧವರು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಉನ್ನತ ಸ್ಥಾನಕ್ಕೆ ಏರಬೇಕು. ಒಕ್ಕಲಿಗರ ಸಂಘದಿಂದ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ಆದ್ಯತೆ ನೀಡಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
ಎಲ್ಲಾ ಭಾಗದ ಸಮುದಾಯ ಬಾಂಧವರ ಹಿತ ಕಾಯುವ ಮೂಲಕ ಸಂಘದಿಂದ ಸಹಕಾರ ನೀಡಲಾಗುವುದು. ಈ ಹಿಂದೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಒಕ್ಕಲಿಗರ ಸಂಘದ ಕಾರ್ಯಚಟುವಟಿಕೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, 2004ರಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಶಾಲೆಯು ಇದೀಗ ಎಲ್‍ಕೆಜಿಯಿಂದ ಪದವಿವರೆಗೆ 850 ವಿದ್ಯಾರ್ಥಿಗಳನ್ನು ಹೊಂದಿದೆ. ಗ್ರಾಮೀಣ ಭಾಗದಿಂದಲೇ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದು, ಇವರುಗಳಿಗೆ ವಸತಿ ನಿಲಯದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕಳೆದ 8 ವರ್ಷದ ಹಿಂದೆಯೇ ರಾಜ್ಯ ಸಂಘಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೆ ಮನ್ನಣೆ ದೊರೆತಿಲ್ಲ. ಈ ಅವಧಿಯಲ್ಲಾದರೂ ರೂ. 1 ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಿದರು. ಇದರೊಂದಿಗೆ ಶಾಲೆಯಲ್ಲಿ ಪ್ರಯೋಗಾಲಯ ನಿರ್ಮಾಣಕ್ಕೆ ಅನುದಾನ ದೊರಕಿಸಿ ಕೊಡುವಂತೆ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಸಂಘದ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ನಿರ್ದೇಶಕರಾದ ಹರಪಳ್ಳಿ ರವೀಂದ್ರ, ಗೌರವಾಧ್ಯಕ್ಷ ಡಾ. ಅಂಜನಪ್ಪ, ಉಪಾಧ್ಯಕ್ಷ ರೇಣುಕಾ ಪ್ರಸಾದ್, ಕಾರ್ಯದರ್ಶಿ ಕೋನಪ್ಪ ರೆಡ್ಡಿ, ಕಿಮ್ಸ್ ಅಧ್ಯಕ್ಷ ಉಮಾಪತಿ, ಹಾಸ್ಟೆಲ್ ಕಮಿಟಿ ಅಧ್ಯಕ್ಷ ಪೂರ್ಣೇಶ್, ನಿರ್ದೇಶಕರಾದ ಹನುಮಂತರಾಯಪ್ಪ, ರಘು ಗೌಡ, ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ಜಗದೀಶ್, ಕೆ.ಟಿ. ಪರಮೇಶ್, ಲಿಂಗರಾಜು, ಗಣಪತಿ, ನಂದಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಶಾಲಾ ಮುಖ್ಯೋಪಾಧ್ಯಾಯಿನಿ ಮಿಲ್ಗ್ರೆಡ್ ಗೋನ್ಸಾಲ್‍ವೆಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.