ಹಿಜಾಬ್ ವಿವಾದ-ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

ನವದೆಹಲಿ, ಫೆ. 11: ಹಿಜಾಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‍ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವಿಚಾರಣೆ ಕರ್ನಾಟಕ ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಈಗ ವಿಚಾರಣೆ ನಡೆಸಲು ಸಾಧ್ಯವಿಲ್ಲ, ಹೈಕೋರ್ಟ್‍ನಲ್ಲಿ ಮೊದಲು ತೀರ್ಪು ಬರಲಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಈ ಮೂಲಕ ಹಿಜಾಬ್ ವಿವಾದ ಕುರಿತು ನಿನ್ನೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಮೌಖಿಕ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದವರಿಗೆ ಆರಂಭಿಕ ಹಿನ್ನಡೆಯಾದಂತಾಗಿದೆ. ಕರ್ನಾಟಕದಲ್ಲಿ ಏನಾಗುತ್ತಿದೆ ಮತ್ತು ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಇದನ್ನು ರಾಷ್ಟ್ರೀಯಮಟ್ಟದ ವಿಷಯವನ್ನಾಗಿ ಮಾಡಬೇಡಿ ಹಾಗೂ ಸುಪ್ರೀಂ ಕೋರ್ಟ್ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುತ್ತದೆ. ಹಿಜಾಬ್ ವಿವಾದವನ್ನು ಖಂಡಿತವಾಗಿಯೂ ಪರಿಗಣಿಸುತ್ತೇವೆ. ಆದರೆ ಹೈಕೋರ್ಟ್ ತೀರ್ಪು ಮೊದಲು ಬರಲಿ, ಆಮೇಲೆ ನೋಡೋಣ ಎಂದು ವಕೀಲ ಕಾಮತ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ. ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ನೋಡುತ್ತಿದ್ದೇವೆ, ನಮಗೆ ಎಲ್ಲರ ಸಾಂವಿಧಾನ ಹಕ್ಕುಗಳನ್ನು ರಕ್ಷಿಸಬೇಕಿದೆ. ವಿದ್ಯಾರ್ಥಿಗಳ ಹಿತ ಕಾಪಾಡುವುದು ನಮ್ಮ ರಕ್ಷಣೆ, ಈ ವಿಚಾರ ಕುರಿತು ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳೂ ಯೋಚನೆ ಮಾಡಲಿ ಎಂದು ಕೂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.

ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಉಡುಗೊರೆ

ಮಂಡ್ಯ, ಫೆ. 11: ಕಾಲೇಜು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಧೈರ್ಯವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇದು ನಡೆದಿದ್ದು ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿ. ಮಂಡ್ಯದ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಕ್ಕೆ ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದರು. ಮುಸ್ಲಿಂ ಸಂಘಟನೆಯೊಂದು ಯುವತಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಇದೀಗ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಕೂಡ ಮುಸ್ಕಾನ್‍ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ಮನೆಗೆ ಭೇಟಿ ನೀಡಿದ ಮಹಾರಾಷ್ಟ್ರದ ಶಾಸಕ ಜಿಶಾನ್ ಸಿದ್ದಿಕ್ ಆಕೆಗೆ ಐ ಫೆÇೀನ್ ಮತ್ತು ಸ್ಮಾರ್ಟ್‍ವಾಚ್ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ.

ರಾಹುಲ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದ ನಿರ್ಮಲ ಸೀತಾರಾಮನ್

ನವದೆಹಲಿ, ಫೆ. 11: ನಾನು ನಿಮ್ಮ ಬಡತನದ ಮನಸ್ಥಿತಿ ಪರಿಹರಿಸಬೇಕೆಂದು ಬಯಸಿದ್ದೀರಾ? ಎಂದು ಇತ್ತೀಚೆಗೆ ತಾವು ಮಂಡಿಸಿದ್ದ ಬಜೆಟ್ ಬಡವರ ಪರವಾಗಿಲ್ಲ ಎಂಬ ಟೀಕೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಈ ಹಿಂದೆ 2013ರಲ್ಲಿ ಬಡತನ ಎನ್ನುವುದು ಒಂದು ಮನಸ್ಥಿತಿ ಎಂದಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್ ಅವರು, ನಾನು ನಿಮ್ಮ ಬಡತನದ ಮನಸ್ಥಿತಿ ಪರಿಹರಿಸಬೇಕೇ ಎಂದು ಪ್ರಶ್ನಿಸಿದರು. ಇಂದು ರಾಜ್ಯಸಭೆಯಲ್ಲಿ 2022-23ರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ತಮ್ಮ ಬಜೆಟ್ ಆರ್ಥಿಕತೆಗೆ ಸ್ಥಿರತೆಯನ್ನು ತರುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕ್ರಮಗಳನ್ನು ಹೊಂದಿದೆ ಎಂದರು. ನೇರವಾಗಿ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್ ಅವರು, ನಿಮ್ಮ ಮಾಜಿ ಅಧ್ಯಕ್ಷರು ಹೇಳಿದ್ದರು, ಬಡತನ ಎಂದರೆ ಆಹಾರ, ಹಣ ಅಥವಾ ವಸ್ತುಗಳ ಕೊರತೆ ಎಂದಲ್ಲ. ಜನರು ಆತ್ಮವಿಶ್ವಾಸ ಪಡೆದುಕೊಂಡರೆ ಬಡತನವನ್ನು ನೀಗಿಸಬಹುದು ಎಂದಿದ್ದರು. ಇದು ಒಂದು ಮನಸ್ಥಿತಿ. ನಾನು ಆ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ನಿಮಗೆ ಅದು ಯಾರೆಂದು ತಿಳಿದಿದೆ ಎಂದರು.

ಪಂಜಾಬ್ ಸಿಎಂ ಸೋದರಳಿಯ ನ್ಯಾಯಾಂಗ ಬಂಧನಕ್ಕೆ

ಚಂಡೀಗಡ, ಫೆ. 11: ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಇದಕ್ಕೂ ಮುನ್ನ ಸ್ಥಳೀಯ ನ್ಯಾಯಾಲಯವು ಭೂಪಿಂದರ್ ಸಿಂಗ್ ಅಲಿಯಾಸ್ ಹನಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫೆಬ್ರವರಿ 11 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿತ್ತು. ಈ ಪ್ರಕರಣವು ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಾಗಿದೆ. ಫೆಬ್ರವರಿ 3 ರಂದು ಕೇಂದ್ರ ತನಿಖಾ ಸಂಸ್ಥೆ ಹನಿಯನ್ನು ಬಂಧಿಸಿತ್ತು. ಅಲ್ಲಿಂದ ಮಂಗಳವಾರದವರೆಗೆ ಇಡಿ ಕಸ್ಟಡಿಯಲ್ಲಿದ್ದ ಹನಿಯ ಕಸ್ಟಡಿ ಅವಧಿ ಮುಗಿದ ನಂತರ ಆತನನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಇಂದು ನಡೆದ ವಿಚಾರಣೆಯಲ್ಲಿ ಹನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಸ್ಟಡಿಯನ್ನು ವಿಸ್ತರಿಸುವಂತೆ ಇಡಿ ಕೋರಿತ್ತು. ಈ ಹಿಂದೆ ಮರಳು ಗಣಿಗಾರಿಕೆ ಹಾಗೂ ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆಯಲ್ಲಿ ಸಹಾಯ ಮಾಡಿದಕ್ಕಾಗಿ 10 ಕೋಟಿ ರೂಪಾಯಿ ನಗದು ಪಡೆದಿರುವುದಾಗಿ ಹನಿ ತಪೆÇ್ಪಪ್ಪಿಕೊಂಡಿದ್ದರು. ಸೋಮವಾರ ನೀಡಿದ ಹೇಳಿಕೆಯಲ್ಲಿ ಇಡಿ ಈ ಬಗ್ಗೆ ಹೇಳಿಕೊಂಡಿದೆ. ಜನವರಿ 18 ರಂದು, ತನಿಖಾ ಸಂಸ್ಥೆ ಹನಿ ಮತ್ತು ಇತರರ ವಿರುದ್ಧ ದಾಳಿ ನಡೆಸಿತ್ತು. ಈ ವೇಳೆ ಹನಿ ಇರುವಲ್ಲಿಂದ ಸುಮಾರು 7.9 ಕೋಟಿ ರೂ., ಆತನೊಂದಿಗೆ ಸಂಬಂಧ ಹೊಂದಿದ್ದ ಸಂದೀಪ್ ಕುಮಾರ್ ಎಂಬುವವರ ಜಾಗದಿಂದ ಸುಮಾರು ಎರಡು ಕೋಟಿ ರೂ. ವಶಪಡಿಸಿಕೊಂಡಿತ್ತು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಲು ಅವಕಾಶ

ಗುವಾಹಟಿ, ಫೆ. 11: ಅರುಣಾಚಲ ಪ್ರದೇಶದ ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಪು ಧರಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿವೆ. 2022-23ರ ಶೈಕ್ಷಣಿಕ ವರ್ಷದಿಂದ ಬುಡಕಟ್ಟು ಮತ್ತು ಇತರ ಸಮುದಾಯಗಳ ವಿದ್ಯಾರ್ಥಿಗಳು ಪ್ರತಿ ಸೋಮವಾರ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಶಾಲೆಗೆ ಬರಲು ಶಿಕ್ಷಣ ಸಂಸ್ಥೆಗಳು ಅವಕಾಶ ನೀಡಿವೆ. 180ಕ್ಕೂ ಹೆಚ್ಚು ಶಾಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಅರುಣಾಚಲ ಪ್ರದೇಶ ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘ ಈ ನಿರ್ಧಾರ ಕೈಗೊಂಡಿದೆ. ಅರುಣಾಚಲದಲ್ಲಿ 100ಕ್ಕೂ ಹೆಚ್ಚು ಬುಡಕಟ್ಟುಗಳು ಮತ್ತು ಉಪ ಬುಡಕಟ್ಟುಗಳಿವೆ. ಆದಿವಾಸಿಗಳು ಸೇರಿದಂತೆ ವಿದ್ಯಾರ್ಥಿಗಳು ಪ್ರತಿ ಸೋಮವಾರ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಶಾಲೆಗೆ ಹೋಗಬೇಕೆಂದು ನಾವು ನಿರ್ಧರಿಸಿದ್ದೇವೆ. ಇದು ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ ಎಂದು ಸಂಘದ ಉಪಾಧ್ಯಕ್ಷ ತಾರ್ ಜೋನಿ ತಿಳಿಸಿದ್ದಾರೆ.

ಹುಲಿ ಉಗುರು ಮಾರಾಟ-ಇಬ್ಬರ ಬಂಧನ

ಮೈಸೂರು, ಫೆ. 11: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹುಲಿ ಉಗುರು ಮತ್ತು ಅದರಿಂದ ತಯಾರಾದ ಆಭರಣಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಎರಡು ವಾರಗಳ ಅವಧಿಯಲ್ಲಿ ಮೈಸೂರು ಅರಣ್ಯ ಸಂಚಾರಿ ದಳ ಎರಡು ಪ್ರಕರಣಗಳನ್ನು ಭೇದಿಸಿ ಇಬ್ಬರನ್ನು ಬಂಧಿಸಿ, ಜಿಲ್ಲೆಯಲ್ಲಿ ಸುಮಾರು 10 ಹುಲಿ ಉಗುರುಗಳು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದೆ. ಕೆಲವು ಆಭರಣ ಮಳಿಗೆಗಳ ಮಾಲೀಕರ ಕೋರಿಕೆಯ ಮೇರೆಗೆ, ಕಳ್ಳಸಾಗಾಣಿಕೆದಾರರು ಅರಣ್ಯ ಪ್ರದೇಶದಲ್ಲಿ ಹುಲಿಗಳು ಸತ್ತಾಗ ಹುಲಿ ಉಗುರುಗಳು ಮತ್ತು ಇತರ ಭಾಗಗಳನ್ನು ಕದಿಯುತ್ತಾರೆ. ಅವುಗಳನ್ನು ಮಾರಾಟ ಮಾಡುವ ಮೂಲಕ ಹಣಗಳಿಸುತ್ತಾರೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.