ಮಡಿಕೇರಿ, ಫೆ. 11: ಪ್ರಾಕೃತಿಕ ಅಸಮತೋಲನ, ಏರುತ್ತಿರುವ ತಾಪಮಾನ ವಿಶ್ವವನ್ನು ಅಪಾಯದ ಅಂಚಿಗೆ ತಳ್ಳುತ್ತಿದೆ. ಇನ್ನೊಂದೆಡೆ ದೇಶ ದೇಶಗಳ ನಡುವಿನ ವೈಷಮ್ಯ ಮತ್ತೊಂದು ಜಾಗತಿಕ ಯುದ್ಧಕ್ಕೆ ಅನುವು ಮಾಡುತ್ತಿದೆ. ಎಲ್ಲವೂ ಆರಂಭಗೊಳ್ಳುವುದು ಗೊಂದಲದ ಗೂಡಾಗಿರುವ ಮನಸ್ಸಿನಿಂದ. ಮನದ ಕ್ಷೋಭೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕೈಗೊಳ್ಳುವ ಯೋಜನೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಸ್ಥಿರ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ. ವಾಸ್ತವದತ್ತ ಕುರುಡು ದೃಷ್ಟಿ ಹರಿಸುತ್ತದೆ. ಪ್ರಾಕೃತಿಕ ಅಸಮತೋಲನಕ್ಕೆ ಎಡೆಮಾಡುತ್ತದೆ. ಹಾಗಾಗಿ ಇಂದು ಅಧ್ಯಾತ್ಮ ಸಾಧನೆಯ ಮೂಲಕ ಸ್ವಸ್ಥ ಮನಸ್ಸು, ಸ್ವಸ್ಥ ಸಮಾಜ ನಿರ್ಮಾಣದ ತುರ್ತು ಅವಶ್ಯಕತೆ ಇದೆ ಎಂದು ಬ್ರಹ್ಮಕುಮಾರಿ ವಿಶ್ವ ‘ರಿನೀವೇಬಲ್ ಎನರ್ಜಿ ಟ್ರಸ್ಟ್’ ಮುಖ್ಯಸ್ಥ ಹಾಗೂ ಸಂಶೋಧಕ ಗೋಲೊ ಜೋ ಚಿಂಪಿಲ್ಜ್ ‘ಶಕ್ತಿ’ಯೊಂದಿಗೆ ಹೇಳಿದರು.
ಮಡಿಕೇರಿ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಲೈಟ್ ಹೌಸಿಗೆ ಎರಡು ದಿನದ ಭೇಟಿಗೆ ಬಂದಿದ್ದ ಗೋಲೊ, ಮನಸ್ಸನ್ನು ಮಹಾಪ್ರಜ್ಞೆಯೊಂದಿಗೆ ಜೋಡಿಸುವು ದರಿಂದ ವಿಶೇಷ ಚೈತನ್ಯ ಉತ್ಪತ್ತಿ ಆಗುತ್ತದೆ. ಕೈಗೊಳ್ಳುವ ಯೋಜನೆಗಳಲ್ಲಿ ಪರಿಪೂರ್ಣತೆ ಇರುತ್ತದೆ ಎಂದರು.
ಬ್ರಹ್ಮಕುಮಾರಿ ಸಂಘಟನೆಯ ಮೂಲಕ ‘ಇಂಡಿಯಾ ಒನ್’ ಎಂಬ ವಿಶೇಷ ಯೋಜನೆ ಕೈಗೊಂಡಿದ್ದು, ಇದರ ಮೂಲಕ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮೌಂಟ್ ಅಬುವಿನ ಬ್ರಹ್ಮಕುಮಾರಿ ಮುಖ್ಯ ಕೇಂದ್ರದಲ್ಲಿ ದಿನಕ್ಕೆ ಮೂವತ್ತೈದು ಸಾವಿರ ಮಂದಿಗೆ ಊಟವನ್ನು ನವೀಕೃತ ಇಂಧನ ಬಳಸಿ ಮಾಡುತ್ತಿರುವುದಾಗಿ ಗೋಲೊ ವಿವರಿಸಿದರು.
ಈ ಯೋಜನೆಯನ್ನು ಭಾರತದಾದ್ಯಂತ ಕೈಗೊಂಡಿದ್ದು, ಸುಮಾರು 700 ಬ್ರಹ್ಮಕುಮಾರಿ ಕೇಂದ್ರಗಳು ಸ್ವಂತ ತಯಾರಿಸಿದ ವಿದ್ಯುತ್ ಬಳಸುತ್ತಿರುವುದಾಗಿ ಗೋಲೊ ಹೇಳಿದರು. ಜೊತೆಗೆ ಮೌಂಟ್ ಅಬುವಿನಲ್ಲಿ ಸುಸಜ್ಜಿತ ಗ್ಲೋಬಲ್ ಆಸ್ಪತ್ರೆಯನ್ನೂ ತೆರೆದಿದ್ದು, ಬಡವರ್ಗಕ್ಕೆ ಉಚಿತ ಚಿಕಿತ್ಸೆ ನೀಡುತ್ತಿರು ವುದಾಗಿ ಗೋಲೊ ಹೇಳಿದರು.
ಎರಡೂ ಬಹುಕೋಟಿ ಯೋಜನೆಗಳಾಗಿದ್ದು, ಭಾರತ, ಯು.ಕೆ. ಹಾಗೂ ಜರ್ಮನ್ ಸರಕಾರಗಳು ಪ್ರಮುಖ ಬಂಡವಾಳ ಹೂಡಿವೆ. ನೂರಾರು ವಿಜ್ಞಾನಿಗಳು ಎಲ್ಲೆಡೆ ಸಂಶೋಧನಾ ನಿರತರಾಗಿದ್ದಾರೆ. ಸೌರಶಕ್ತಿ ಉತ್ಪಾದನೆ, ಉಪಯೋಗಗಳ ಕುರಿತು ಅಲ್ಲಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ.
ಇತರ ಚಟುವಟಿಕೆಗಳೊಂದಿಗೆ ಸರಳ ಜೀವನ, ಧ್ಯಾನ, ಸಸ್ಯಾಹಾರ, ಶಾಂತ ಜೀವನದ ತರಬೇತಿಗಳನ್ನು ದೇಶ-ವಿದೇಶಗಳಲ್ಲಿ ಪ್ರಚಾರ ಮಾಡುತ್ತಿರುವ ಈ ಸಂಸ್ಥೆ, ಮೇಲಿನ ಅಭ್ಯಾಸಗಳು ಪ್ರಕೃತಿಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ.
ಸಂದರ್ಶನ ಸಂದರ್ಭ ಲೈಟ್ ಹೌಸ್ ಮುಖ್ಯಸ್ಥೆ ಸಹೋದರಿ ಗಾಯತ್ರಿ ಹಾಗೂ ಸಹೋದರಿ ಧನಲಕ್ಷ್ಮಿ ಹಾಜರಿದ್ದರು.
-ಅನಂತಶಯನ