ಮಡಿಕೇರಿ, ಫೆ. 12: ಅಕ್ರಮ ಹರಳು ಕಲ್ಲು ದಂಧೆಗೆ ಸಂಬಂಧಿಸಿದಂತೆ ಸಿಓಡಿ ತನಿಖೆ ನಡೆಸುವ ಮೂಲಕ ದಂಧೆಯನ್ನು ಸಂಪೂರ್ಣವಾಗಿ ಬಯಲಿಗೆಳೆಯ ಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಳು ಕಲ್ಲು ಅಕ್ರಮ ದಂಧೆ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ದಂಧೆಯಲ್ಲ. 2004 -05 ನೇ ಇಸವಿಯಿಂದಲೇ ಇದು ನಡೆಯುತ್ತಿದೆ. ಕೇವಲ ಭಾಗಮಂಡಲಕ್ಕೆ ಮಾತ್ರ ಈ ದಂಧೆ ಸೀಮಿತವಾಗಿಲ್ಲ. 2ನೇ ಮೊಣ್ಣಂಗೇರಿ, ಕಡಮಕಲ್ಲು ಭಾಗಗಳಲ್ಲೂ ನಿರಂತರವಾಗಿ ಇದು ನಡೆಯುತ್ತಿತ್ತು. ಈ ದಂಧೆಯಿಂದ ಅನೇಕರು ಪ್ರಾಣಕಳೆದುಕೊಂಡ ಘಟನೆಗಳೂ ನಡೆದಿವೆ.
ಕೆಲವು ಪ್ರಕರಣಗಳು ಹೊರಗೆ ಬರಲೇ ಇಲ್ಲ. ಆದರೆ ಇಷ್ಟೆಲ್ಲಾ ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಅರಣ್ಯ ಇಲಾಖೆ ಏಕೆ ಕಣ್ಣು ಮುಚ್ಚಿ ಕುಳಿತಿತ್ತು ಎಂಬ ಸಂಶಯ ಕಾಡುತ್ತಿದೆ ಎಂದರು. ಅರಣ್ಯದಲ್ಲಿ ಪ್ರಾಣಹೋದರೆ ಯಾಕಾಗಿ ಹೋಯಿತು ಎನ್ನುವಂತದ್ದು, ಅರಣ್ಯಾಧಿಕಾರಿ ಗಳಿಗೆ ಗೊತ್ತಿದೆ ಆದರೂ ಕೂಡ ಅವರುಗಳು ಚಕಾರ ಎತ್ತಲಿಲ್ಲ. ಯಾವುದೇ ಪ್ರಕರಣಗಳು ದಾಖಲಾಗಲಿಲ್ಲ. ಪತ್ರಿಕೆಗಳಲ್ಲಿ ವರದಿಯಾಗಿ ರುವಂತೆ ಹರಳು ಕಲ್ಲು ದಂಧೆಯಲ್ಲಿ ಅಲ್ಲಿಯ ಅರಣ್ಯ ಇಲಾಖೆ ಸಿಬ್ಬಂದಿಗಳ ಪಾತ್ರ ಇದೆ. ಹಾಗೆಂದು ಯಾರೋ ಒಬ್ಬರನ್ನು ಬಂಧಿಸಿದ ಮಾತ್ರಕ್ಕೆ ಈ ಅಕ್ರಮ ದಂಧೆಯ ಸಂಪೂರ್ಣ ವಾಸ್ತವ ಹೊರಬರುವುದಿಲ್ಲ.
ಆದ್ದರಿಂದ 2004-05ನೇ ಸಾಲಿನಿಂದ ಇಲ್ಲಿವರೆಗೆ ನಡೆದಿರುವ ಅಕ್ರಮ ಹರಳು ಕಲ್ಲು ದಂಧೆ ಬಗ್ಗೆ ಸಮಗ್ರ ತನಿಖೆ ಮಾಡಿ ನಿಜಾಂಶ ಬಯಲಿಗೆಳೆಯಬೇಕಿದೆ. ಈ ದಂಧೆಯಲ್ಲಿ ಭಾರೀ ಪ್ರಭಾವಿಗಳ ಕೈವಾಡವೂ ಇದೆ. ಮಡಿಕೇರಿ ನಗರದಲ್ಲೇ ಅನೇಕರು ಇದ್ದಾರೆ ಎನ್ನುವ ವದಂತಿಗಳೂ ಇವೆ. ಇವೆಲ್ಲವನ್ನು ಬಯಲಿಗೆಳೆಯ ಬೇಕಾದರೆ ಸಿಓಡಿ ತನಿಖೆ ನಡೆಯಬೇಕು. ಈ ದಂಧೆಯ ನೈತಿಕ ಹೊಣೆಯನ್ನು ಅರಣ್ಯ ಇಲಾಖೆ ಹೊರಬೇಕು. ಒಂದಿಬ್ಬರು ಅರಣ್ಯ ಸಿಬ್ಬಂದಿಯನ್ನು ಅಮಾನತು ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ. ಈ ದಂಧೆಯ ಬಗ್ಗೆ ಈ ಹಿಂದೆಯೂ ತಾನು ಸರ್ಕಾರದ ಗಮನ ಸೆಳೆದಿದ್ದೆ ಎಂದು ಅವರು ಹೇಳಿದರು.