ಮಡಿಕೇರಿ, ಫೆ. 12: ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ದಂತೆ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದಂತೆ ತಾ.14ರಿಂದ 9 ಹಾಗೂ ಹತ್ತನೇ ತರಗತಿಗಳು ಆರಂಭಗೊಳ್ಳಲಿದ್ದು, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಪಾಲನೆ ಮಾಡದೆ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸೂಚನೆ ನೀಡಿದ್ದಾರೆ.

ನ್ಯಾಯಾಲಯದ ಆದೇಶದಂತೆ ಸರಕಾರ ತಾ. 14ರಿಂದ 9 ಹಾಗೂ ಹತ್ತನೇ ತರಗತಿಗಳನ್ನು ಆರಂಭ ಮಾಡುವ ಸಂಬಂಧ ಇಂದು ಏರ್ಪಡಿ ಸಲಾಗಿದ್ದ ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ-ಕಾಲೇಜು ಮುಖ್ಯೋಪಾಧ್ಯಾ ಯರುಗಳು, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಆರಂಭಿಸಲಾಗುವುದು. ಮೂರು ದಿನಗಳ ನಂತರ ಕಾಲೇಜು ಗಳನ್ನು ಆರಂಭಿಸಲಾಗುವದು. ಉಚ್ಚ ನ್ಯಾಯಾಲಯ ಮಧ್ಯಂತರ ತೀರ್ಪಿನಲ್ಲಿ ನೀಡಿರುವ ಆದೇಶವನ್ನು ಅರ್ಥ ಮಾಡಿಕೊಂಡು ಯಥಾವತ್ತಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಿದರು.

ಶಾಲಾ ತರಗತಿಯೊಳಗಡೆ ಸ್ಯಾಫ್ರಾನ್, ಸ್ಕಾರ್ಪ್, ಹಿಜಾಬ್, ಶಾಲು, ಧಾರ್ಮಿಕ ಧ್ವಜ ಹಾಗೂ ಅದೇ ರೀತಿಯಾದವುಗಳನ್ನು ಧರಿಸಬಾರದು. ಮುಂದಿನ ಆದೇಶ ಬರುವವರೆಗೂ ಇದನ್ನು ಪಾಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಯಾವುದೇ ತೊಂದರೆ ಆಗಬಾರದು. ತೊಂದರೆ ಆದರೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾದಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಸರಕಾರ ಸೂಚನೆ ನೀಡಿದೆ. ಹಾಗಾಗಿ ತೊಂದರೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆಡಳಿತ ಮಂಡಳಿ ವ್ಯವಸ್ಥೆ ಮಾಡಬೇಕು

ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ನ್ಯಾಯಾಲಯದ ಆದೇಶದಲ್ಲಿ ತರಗತಿಯೊಳಗಡೆ ಧರಿಸಬಾರದು ಎಂದು ತಿಳಿಸಲಾಗಿದೆ. ಶಾಲಾ ಆವರಣದೊಳಗಡೆ ಧರಿಸಿಕೊಂಡು ಬಂದರೆ ಗೊಂದಲ ಉಂಟಾಗಲಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗಳು, ಶಾಲಾ, ಕಾಲೇಜಿನಲ್ಲಿ ಅಭಿವೃದ್ಧಿ ಸಮಿತಿಯವರು, ಆಡಳಿತ ಮಂಡಳಿ ಯವರು ಈ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ನ್ಯಾಯಾಲಯದ ಆದೇಶವನ್ನು ವಿಶೆÉ್ಲೀಷಣೆ ಮಾಡಲು, ಬದಲಾವಣೆ ಮಾಡುವಷ್ಟು ನಾವು ದೊಡ್ಡವರಲ್ಲ. ಧಾರ್ಮಿಕ ಪದ್ಧತಿ ಯಂತೆ ಸಾರ್ವಜನಿಕವಾಗಿ ಆಚರಣೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಶಾಲಾ ಕೇಂದ್ರಗಳಲ್ಲಿ ನಿಯಮ ಪಾಲನೆ ಮಾಡಬೇಕಿದೆ. ಹಾಗಾಗಿ ಆಡಳಿತ ಮಂಡಳಿಯವರು ಜವಾಬ್ದಾರಿ ತೆಗೆದುಕೊಂಡು ಗಂಭೀರವಾಗಿ ಪರಿಗಣಿಸಿ ಸೌಹಾರ್ದತೆಯ ವಾತಾವರಣಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲರೂ ಸೇರಿದರೆ ಸಮಸ್ಯೆ ಬಗೆ ಹರಿಯಲಿದೆ. ವಿಕೋಪ ಸಂದರ್ಭ ಯಾರದೋ ಮನೆಯ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸಿದಂತೆ ಈ ವಿಚಾರದಲ್ಲೂ ಎಲ್ಲರೂ ಸೇರಿಕೊಂಡು ಸಹ ಬಾಳ್ವೆ ಯಿಂದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೈ ಜೋಡಿಸೋಣ ಎಂದು ಹೇಳಿದರು.

ಸೋಮವಾರದಿಂದ ಮೂರು ದಿನಗಳ ಕಾಲ ಅಧಿಕಾರಿಗಳನ್ನೊಳ ಗೊಂಡ ತಂಡ ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ಯಾವದೇ ತೊಂದರೆ ಗಳಾಗದಂತೆ ಗಮನ ಹರಿಸಲಾಗು ವದು. ಕೆಲವೊಂದು ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲಾಗುವದೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಹಾಸ್ಟೆಲ್‍ನಲ್ಲಿ ವ್ಯವಸ್ಥೆ

ಕುಶಾಲನಗರದ ಹಾಸ್ಟೆಲ್‍ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಾರ್ಡನ್‍ಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಮಕ್ಕಳನ್ನು ಓದು ಮತ್ತು ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳುವಂತೆ ನೋಡಿ ಕೊಳ್ಳಬೇಕು. ಅಪರಾಧ ಚಟುವಟಿಕೆಗೆ ಅವಕಾಶ ನೀಡಬಾರದು. ಒಮ್ಮೆ ಪೊಲೀಸ್ ಕೇಸ್ ಆದರೆ ಮಕ್ಕಳ ಭವಿಷ್ಯ ಹಾಳಾಗಲಿದೆ ಎಂಬ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮಾತನಾಡಿ; ಎಲ್ಲರೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಧಾರ್ಮಿಕ ಮುಖಂಡರುಗಳಾದ ಬೇಬಿ ಮ್ಯಾಥ್ಯೂ, ಇಮ್ರಾನ್, ವಿವಿಧ ಶಾಲೆ, ಕಾಲೇಜುಗಳ ಮುಖ್ಯೋಪಾಧ್ಯಾರುಗಳು, ಪ್ರಾಂಶುಪಾಲರುಗಳು ಸಂಶಯಗಳನ್ನು ಹೊರಹಾಕಿ ಮಾಹಿತಿ ಪಡೆದು ಕೊಂಡರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಇದ್ದರು.