ಮಡಿಕೇರಿ, ಫೆ. ೧೦: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾ.ಪಂ. ಕಳೆದ ಒಂದು ವರ್ಷದಲ್ಲಿ ನಾಲ್ಕು ಪಿಡಿಓಗಳನ್ನು ಕಂಡಿದೆ. ಎರಡು-ಮೂರು ತಿಂಗಳಿಗೊಮ್ಮೆ ಪಿಡಿಓಗಳು ಬದಲಾಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನೆಡೆಯಾಗಿದೆ.

ಕಿರುಗೂರು ಪಂಚಾಯ್ತಿಯ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಉತ್ಸಾಹಿ ಸದಸ್ಯರುಗಳ ತಂಡ ಗ್ರಾ.ಪಂ.ಯಲ್ಲಿದೆ. ಆದರೆ ಪಿಡಿಓಗಳ ವರ್ಗಾವಣೆಯಿಂದ ಯಾವುದೇ ಕೆಲಸ, ಕಾರ್ಯಗಳು ಸಕಾಲದಲ್ಲಿ ನಡೆಯದೆ ಅಭಿವೃದ್ಧಿ ಕುಂಠಿತವಾಗುತ್ತಿದೆ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ. ಅಲ್ಪಾವಧಿಯಲ್ಲಿ ಅಧಿಕಾರಿಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ದೊರೆಯದ ಕಾರಣ ಎಲ್ಲ ಸದಸ್ಯರುಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಕೊನೆಯ ಪ್ರಯತ್ನವಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪಿಡಿಓ ಅವರನ್ನು ಬದಲಾಯಿಸದೆ ಇಲ್ಲೇ ಉಳಿಸುವಂತೆ ಒತ್ತಾಯಿಸಿದ್ದಾರೆ.