ಕಣಿವೆ, ಫೆ. 11: ಆಹಾರಕ್ಕಾಗಿ ಹಾಹಾಕಾರಪಡುವ ಕಾಡಾನೆಯೊಂದು ಕಾಡಿನಿಂದ ನಾಡಿನತ್ತ ಧಾವಿಸಿ ಬಂದು ಕಾಡಿಗೆ ಹಿಂದಿರುಗಲಾರದೆ ನಿತ್ರಾಣ ಗೊಂಡ ಘಟನೆ ನಂಜರಾಯಪಟ್ಟಣ ಬಳಿಯ ದಾಸವಾಳದಲ್ಲಿ ನಡೆದಿದೆ.

ಗುರುವಾರ ರಾತ್ರಿ ಮೀನುಕೊಲ್ಲಿ ಅರಣ್ಯ ಭಾಗದಿಂದ ಎಂದಿನಂತೆ ಆಹಾರ ಅರಸಿ ನಾಡಿನತ್ತ ಮೂರು ಕಾಡಾನೆಗಳು ಧಾವಿಸಿ ಬಂದಿದ್ದು, ಎರಡು ಕಾಡಾನೆಗಳು ಅರಣ್ಯಕ್ಕೆ ಮರಳಿದರೆ ಜೊತೆಯಲ್ಲಿದ್ದ ಹೆಣ್ಣಾನೆ ದಾಸವಾಳದ ಖಾಸಗಿ ತೋಟ ವೊಂದರಲ್ಲಿಯೇ ನಿತ್ರಾಣಗೊಂಡು ಕುಸಿದು ಬಿದ್ದಿದೆ.

ಆದರೆ, ಕಾಡಿನಿಂದ ಹೊರಬರುವಾಗ ಜೊತೆಯಲ್ಲೇ ಬಂದ ಕಾಡಾನೆ ಮರಳದೇ ಇದ್ದ ಕಾರಣ ಕಾಡಿನತ್ತ ಕರೆದೊಯ್ಯಲು ರಾತ್ರಿಯಿಡೀ ಎರಡು ಕಾಡಾನೆಗಳು ವ್ಯರ್ಥ ಕಸರತ್ತು ಮಾಡಿವೆ. ಆದರೆ ನೆಲಕ್ಕೆ ಕುಸಿದು ಬಿದ್ದ ಹೆಣ್ಣಾನೆ ಮೇಲೇಳಲಾರದೆ ಅಸಹಾಯಕ ಸ್ಥಿತಿ ತಲುಪಿದಾಗ ಈ ಆನೆಗಾಗಿ ಕಾದುನಿಂತ ಎರಡು ಕಾಡಾನೆಗಳು ಶುಕ್ರವಾರ ಬೆಳಿಗ್ಗೆ ಸ್ಥಳೀಯ ತೋಟಗಳ ಕಾರ್ಮಿಕರು ಹಾಗೂ ಮಾಲೀಕರನ್ನು ಅಟ್ಟಾಡಿಸಿವೆ ಎಂದು ಸ್ಥಳೀಯ ನಿವಾಸಿಯೂ ಆದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ‘ಶಕ್ತಿ’ಗೆ ವಿವರಿಸಿದರು.

ಬಳಿಕ ಈ ಕಾಡಾನೆಗಳು ಅಟ್ಟಾಡಿಸುವುದನ್ನು ಕಂಡು ಅಲ್ಲಿ ಹೋಗಿ ನೋಡಿದಾಗ ನಿತ್ರಾಣದ ಸ್ಥಿತಿಯಲ್ಲಿದ್ದ ಕಾಡಾನೆ ಮೇಲೆ ಏಳಲೇ ಇಲ್ಲ ಎಂದು ವಲಯ ಅರಣ್ಯಾಧಿಕಾರಿ ಹೇಳುತ್ತಾರೆ. ಕಾಡಾನೆಗಳ ಧಾಳಿಯಿಂದಾಗಿ ದಾಸವಾಳ ಗ್ರಾಮದ ಹಡ್ಳಳ್ಳಿ ಅಯ್ಯಪ್ಪ, ಪ್ರಸನ್ನ, ಪ್ರವೀಣ, ಮಂಜೇಗೌಡ ಎಂಬವರಿಗೆ ಸೇರಿದ ಅಡಿಕೆ ತೋಟ ಸಂಪೂರ್ಣ ಹಾನಿಯಾಗಿದೆ. ಹಾಗೆಯೇ ಕೆದಂಬಾಡಿ ರಘು, ಕಲ್ಲೇಗೌಡನ ಸುರೇಶ್ ಎಂಬವರ ಅಡಿಕೆ ಹಾಗೂ ತೆಂಗು ಸಂಪೂರ್ಣ ನೆಲಕಚ್ಚಿದೆ.

ಮೇಲೇಳಲಾರದೆ ಸಂಪೂರ್ಣ ನಿತ್ರಾಣಗೊಂಡಿರುವ ಕಾಡಾನೆಗೆ ಹುಣಸೂರು ವನ್ಯಜೀವಿ ವಿಭಾಗದ ಆನೆ ವೈದ್ಯ ಡಾ. ಚೆಟ್ಟಿಯಪ್ಪ ಸ್ಥಳಕ್ಕೆ ಆಗಮಿಸಿ ಚುಚ್ವುಮದ್ದು ನೀಡಿದರೂ ಕೂಡ ಕಾಡಾನೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ದುಬಾರೆಯ 3 ಸಾಕಾನೆಗಳನ್ನು ಬಳಸಿ ಆನೆ ಸ್ಥಳಾಂತರಕ್ಕೆ ಪ್ರಯತ್ನಿಸ ಲಾಯಿತಾದರೂ ವಿಫಲವಾಯಿತು.

ಈಗಾಗಲೇ ಕಾಡಂಚಿನ ಗ್ರಾಮಗಳ ಉದ್ದಕ್ಕೂ ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವತಿಯಿಂದ ರೈಲ್ವೆ ಕಂಬಿ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ಈ ರೈಲ್ವೆ ಕಂಬಿ ಅಳವಡಿಸದೇ ಖಾಲಿ ಬಿಟ್ಟ ಪ್ರದೇಶದಿಂದ ಕಾಡಿನಿಂದ ನಾಡಿನತ್ತ ಕಾಡಾನೆಗಳು ಬರುತ್ತಿವೆ.

ನಿತ್ರಾಣಗೊಂಡು ಕುಸಿದಿರುವ ಆನೆ ಹೆಣ್ಣಾನೆಯಾಗಿದ್ದು, ಸುಮಾರು 7-8 ವರ್ಷಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಆನೆಯ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ರಾತ್ರಿಯಿಡೀ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳದಲ್ಲೇ ಇದ್ದು, ಚಿಕಿತ್ಸೆ ಮುಂದುವರಿಸಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಮಾಹಿತಿ ಇತ್ತಿದ್ದಾರೆ.