ಕೂಡಿಗೆ, ಫೆ. 11: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹಿಂಭಾಗದ ಹೂಳು ಎತ್ತುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ಹಟ್ಟಿ ಹೊಳೆ ಮತ್ತು ಹರದೂರು ಭಾಗದಲ್ಲಿ ವಿವಿಧ ತಡೆಗೊಡೆ ನಿರ್ಮಾಣದ ಯೋಜನೆಗೆ ರೂ. 130 ಕೋಟಿ ವೆಚ್ಚದ ಕ್ರಿಯಾ ಯೋಜನೆ ಪ್ರಸ್ತಾವನೆಯು ಈಗಾಗಲೇ ಸರಕಾರಕ್ಕೆ ಸಲ್ಲಿಕೆಯಾಗಿದೆ. ಇದನ್ನು ಇಲಾಖೆಯ ಮುಖೇನ ಕಳುಹಿಸಿ ನಾಲ್ಕು ವರ್ಷಗಳು ಕಳೆದರೂ ಇದುವರೆಗೆ ಯಾವುದೆ ಪ್ರಕ್ರಿಯೆ ಇನ್ನೂ ಸಹ ಕಾರ್ಯಗತವಾಗದೆ ಕಾಮಗಾರಿಯು ಆರಂಭಗೊಂಡಿಲ್ಲ.
2018ರಲ್ಲಿ ಅಧಿಕ ಮಳೆ ಮತ್ತು ಬೆಟ್ಟ ಗುಡ್ಡ ಕುಸಿತದಿಂದಾಗಿ ಹಾರಂಗಿ ಅಣೆಕಟ್ಟೆಯ ಮೇಲ್ಬಾಗದ ಜಲಾನಯನ ಪ್ರದೇಶದ ಮಣ್ಣು ನೀರಿನಲ್ಲಿ ಹೆಚ್ಚು ಶೇಖರಣೆವಾಗಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಯಾಗುತ್ತಿರುವುದನ್ನು ತಿಳಿದು ಕಾವೇರಿ ನೀರಾವರಿ ನಿಗಮದ ಮೂಲಕ ಸರ್ವೆ ನಡೆಸಿ ಅದರ ಅನುಗುಣವಾಗಿ ಸರಕಾರಕ್ಕೆ ಹೂಳು ಎತ್ತುವ ಪ್ರಕ್ರಿಯೆಗೆ ರೂ. 130 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ತಯಾರಿಸಿ ಕಳುಹಿಸಲಾಗಿತ್ತು. ಅದರಂತೆ ಸರಕಾರ ಇಲಾಖೆಯ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಿದರೂ, ಸಹ ಇದುವರೆಗೆ ಸಮರ್ಪಕವಾದ ಟೆಂಡರ್‍ದಾರರು ಭಾಗವಹಿಸದ ಹಿನ್ನೆಲೆಯಲ್ಲಿ, ಯೋಜನೆಯು ನಾಲ್ಕು ವರ್ಷಗಳು ಕಳೆದರೂ ಸಹ ಯಾವುದೇ ಪ್ರಗತಿ ಕಂಡಿಲ್ಲ.
ಕಳೆದ ಮೂರು ವರ್ಷಗಳಿಂದಲೂ ಸರಕಾರ ಮಟ್ಟದಲ್ಲಿ ಕೇವಲ ಚರ್ಚೆಗಳು ನಡೆಯುತ್ತಿವೆ. ಅಧಿವೇಶನ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಚರ್ಚೆ ನಡೆಸಿದರೂ ಸಹ ಇನ್ನೂ ಟೆಂಡರ್ ಪ್ರಕ್ರಿಯೆ ನಡೆಯದೆ ಇರುವುದರಿಂದ ಹೂಳು ಎತ್ತುವ ಯೋಜನೆಯು ಇನ್ನೂ ಆರಂಭವಾಗಿಲ್ಲ. ಈಗಾಗಲೇ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಯೋಜನೆಯ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಸಿ ಪೂರ್ಣಗೊಳಿಸಿದರೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವು ಹೆಚ್ಚಾಗುವುದು ಜೊತೆಗೆ ಜಲಾನಯನ ಪ್ರದೇಶದ ರೈತರಿಗೂ ಅನುಕೂಲವಾಗುವುದು.
- ಕೆ.ಕೆ. ನಾಗರಾಜಶೆಟ್ಟಿ.