ಶನಿವಾರಸಂತೆ, ಫೆ. ೧೦: ಕಟ್ಟಡ ನಿರ್ಮಾಣ ಸಮಯದಲ್ಲಿ ನಡೆಯುವ ಅನಾಹುತ ತಡೆಯಲು ಕಟ್ಟಡ ಕಾರ್ಮಿಕರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಸುರಕ್ಷಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹೇಳಿದರು.
ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆದ ಹೋಬಳಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅನಾಹುತಗಳು ಸಂಭವಿಸಿದಾಗ ವಿಮೆ ಸೌಲಭ್ಯ ಪಡೆಯಲು ಕಾರ್ಮಿಕ ಗುರುತಿನ ಚೀಟಿ ಉಪಯೋಗವಾಗಲಿದ್ದು, ಪುರುಷರು ಮಾತ್ರವಲ್ಲ, ಮಹಿಳಾ ಕಟ್ಟಡ ಕಾರ್ಮಿಕರೂ ನೋಂದಾಯಿಸಿ ಲೇಬರ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಭಗಟಿ ಮಾತನಾಡಿ, ಕಟ್ಟಡ ಕಾರ್ಮಿಕರು ಇ- ಶ್ರಮ್ ಗುರುತಿನ ಚೀಟಿ ಪಡೆಯುವುದರಿಂದ ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಉಪಯೋಗವಾಗಲಿದೆ. ಕಟ್ಟಡ ಜೊತೆಗೆ ಇತರೆ ಎಲ್ಲಾ ವಲಯಗಳ ಕಾರ್ಮಿಕರು ಇ-ಶ್ರಮ್ ಕಾರ್ಡ್ಗೆ ನೋಂದಾಯಿಸಿಕೊಳ್ಳಬಹುದು ಎಂದರು.
ಶನಿವಾರಸಂತೆ ಭಾರತಿ ಪಿಯು ಕಾಲೇಜು ಉಪನ್ಯಾಸಕ ಸೋಮಶೇಖರ್ ಮಾತನಾಡಿ, ಕಾರ್ಮಿಕ ಸಂಘದಲ್ಲಿ ಎಲ್ಲಾ ಜಾತಿ - ಧರ್ಮದವರು ತಾರತಮ್ಯವಿಲ್ಲದೇ ಸಂಘಟಿತರಾಗಿರುವುದು ಬಸವಣ್ಣನವರ ಅನುಭವ ಮಂಟಪದAತೆ ಭಾಸವಾಗುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ವಿದ್ಯುತ್ ಗುತ್ತಿಗೆದಾರ ಯು.ವಿ. ಶಿವಪ್ರಸಾದ್ ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎ.ಸಿ. ಸಾಬು ಮಾತನಾಡಿದರು.
ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಹಾಗೂ ಹೆಲ್ತ್ ಕಿಟ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ಉಪಕಾರ್ಯದರ್ಶಿ ಇಸ್ತಿಕಾರ್ ಪಾಷ, ಗೌರವಾಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ, ಜಾಮೀಯ ಮಸ್ಜಿದ್ ಅಧ್ಯಕ್ಷ ಮುಜಾಹಿದ್ ಪಾಷ, ದಾನಿಗಳಾದ ಮಾದವ್ ಲಾಲ್ ಚೌದರಿ, ಗಣೇಶ್ ಕೃಷ್ಣ, ಅಬ್ದುಲ್ ಕರೀಂ, ಚಾಂದ್, ಕೆ.ಎ. ರಾಜು, ಸಂಘದ ಪದಾಧಿಕಾರಿಗಳಾದ ಖಲೀಲ್, ಅಬ್ದುಲ್ಖಾದರ್, ಶೇಖರ್, ಬಷೀರ್, ಮುನ್ನಾ, ಸಾಗರ್, ಗಣೇಶ್, ಸೈಯದ್, ಜಾವಿದ್, ಬಾಲಸುಬ್ರಮಣಿ, ಎಲ್.ಬಿ. ರವಿ ಉಪಸ್ಥಿತರಿದ್ದರು.