ಶನಿವಾರಸಂತೆ, ಫೆ. ೧೦: ಶನಿವಾರಸಂತೆ ರೋಟರಿ ಕ್ಲಬ್‌ಗೆ ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ರೋಟರಿಯನ್ ಎ.ಆರ್. ರವೀಂದ್ರ ಭಟ್ ತಾ. ೧೪ ರಂದು ಭೇಟಿ ನೀಡಲಿದ್ದು, ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಇದುವರೆಗೂ ಮಾಡಿರುವ ಪ್ರಗತಿ ಸಾಧನೆ ಕಾರ್ಯಕ್ರಮಗಳ ಅಂಗವಾಗಿ ಸಮಾಜ ಸೇವೆ, ರೋಟರಿ ಇಂರ‍್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದರೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಪಿ. ಮೋಹನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾ. ೧೪ ರಂದು ನಡೆಯಲಿರುವ ಕಾರ್ಯಕ್ರಮಗಳ ಕುರಿತು ರೋಟರಿಯನ್ ಕೆ.ಪಿ. ಜಯಕುಮಾರ್ ಮಾತನಾಡಿ, ಅಂದು ಬೆಳಿಗ್ಗೆ ೯.೩೦ ರಿಂದ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಮುಳ್ಳೂರು ಜಂಕ್ಷನ್ ರಸ್ತೆ ತಿರುವುಗಳಲ್ಲಿ ಅಳವಡಿಸಿರುವ ಮಿರರ್ ಉದ್ಘಾಟನೆ, ಗೋಪಾಲಪುರದಲ್ಲಿ ಸ್ವಾಗತ ಕಮಾನು ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಗುತ್ತದೆ ಎಂದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಕಟ್ಟಡ ಕಾರ್ಮಿಕರ ಮತ್ತು ವಾಹನ ಚಾಲಕರ ಸಂಘದ ಸದಸ್ಯರಿಗೆ ಟಿ.ಟಿ. ಚುಚ್ಚುಮದ್ದು ಹಾಕಿಸುವ ಆರೋಗ್ಯ ಸೇವಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ವಿಘ್ನೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಇಂರ‍್ಯಾಕ್ಟ್ ಕ್ಲಬ್ ವಿದ್ಯಾರ್ಥಿನಿಯರೊಂದಿಗೆ ರೋಟರಿ ರಾಜ್ಯಪಾಲರು ಮತ್ತು ರೋಟರಿ ಪ್ರಮುಖರು ಸಮಾಜ ಸೇವೆ ಮುಂತಾದ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಸಂಜೆ ರೋಟರಿ ಕ್ಲಬ್‌ನ ವಾರ್ಷಿಕ ಸಭೆ ನಡೆಯುತ್ತದೆ ಎಂದರು. ರೋಟರಿ ವಲಯ ಸೇನಾನಿ ಹೆಚ್.ಎಸ್. ವಸಂತ್ ಮಾತನಾಡಿದರು. ಶನಿವಾರಸಂತೆ ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎಸ್. ವಸಂತ್ ಗೋಷ್ಠಿಯಲ್ಲಿ ಹಾಜರಿದ್ದರು.