ಮೇವಿಗಾಗಿ ಜಾನುವಾರುಗಳ ಪರದಾಟ
ಸುಂಟಿಕೊಪ್ಪ, ಫೆ. ೯: ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮಳೆಗಾಲದಲ್ಲಿ ತುಂಬಿದ ನೀರು ಇಳಿಮುಖವಾಗದೆ ಮೇವಿಗಾಗಿ ದನ ಕರುಗಳು ಪರದಾಡುವಂತಾಗಿದೆ.
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಾಧಿಕಾಲದಿಂದಲೂ ಭತ್ತದ ಬೆಳೆಗಳನ್ನು ರೂಡಿಸಿಕೊಂಡು ಬರುತ್ತಿದ್ದ ರೈತರು ಈ ಪೀಳಿಗೆಯಲ್ಲೂ ಲಾಭ ನಷ್ಟದ ಲೆಕ್ಕಾಚಾರ ಬದಿಗೊತ್ತಿ ಗದ್ದೆ - ಕಾಫಿಯಲ್ಲಿ ತೊಡಗಿಸಿಕೊಂಡಿದ್ದಾರೆ.
೧೯೭೨ ರಲ್ಲಿ ಹಾರಂಗಿ ಜಲಾಶಯ ನಿರ್ಮಾಣವಾದ ನಂತರ ಹಾರಂಗಿ, ಯಡವಾರೆ, ಹೊರಬಾಳೆ, ಐಗೂರು, ಗರಗಂದೂರು, ಕಲ್ಲೂರು, ಹೇರೂರು, ಮಳ್ಳೂರು, ೭ನೇ ಹೊಸಕೋಟೆ ಹಾಗೂ ನಾಕೂರು ಮೊದಲಾದ ಪ್ರದೇಶದ ರೈತರು ಭೂಮಿ ಮುಳುಗಡೆಯಾದರೂ, ಸರಕಾರದಿಂದ ಸೂಕ್ತ ಪರಿಹಾರ ಸಿಗದಿದ್ದರೂ ಉಳಿದ ಜಮೀನಿನಲ್ಲಿ ಪರಿಹಾರ ನೀಡಿದ ಪಾಳು ಭೂಮಿಯನ್ನು ಶ್ರಮವಹಿಸಿ ದುಡಿದು ಕಾಫಿ, ಕರಿಮೆಣಸು ಇನ್ನಿತರ ಕೃಷಿ ಬೆಳೆಸುತ್ತಿದ್ದಾರೆ. ಉಳಿದ ಗದ್ದೆಯನ್ನು ಶ್ರಮವಹಿಸಿ ಪಾಳುಬಿಡದೆ ಜೀತಮಾಡಿ ಕಾಪಾಡಿಕೊಂಡಿದ್ದಾರೆ. ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧-೨ ಎಕರೆ ಪ್ರದೇಶದಲ್ಲಿ ಕಾಫಿ, ಕರಿಮೆಣಸು ಹೊಂದಿದವರು ಮಧ್ಯಮ ವರ್ಗದ ಬೆಳೆಗಾರರು ನೆಲೆಸಿದ್ದಾರೆ.
ಪ್ರತಿ ವರ್ಷ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಹರದೂರು ಸೇತುವೆ ಹಾಗೂ ಆಸುಪಾಸಿನಲ್ಲಿ ಮಳೆಗಾಲದಲ್ಲಿ ತುಂಬಿದ ಹಾರಂಗಿ ಜಲಾಶಯದ ಹಿನ್ನೀರನ್ನು ಹಾರಂಗಿ ಜಲಾಶಯದ ನೀರಾವರಿ ಇಲಾಖೆ ಅಧಿಕಾರಿಗಳು ಹೊರಬಿಡುತ್ತಿದ್ದರು. ಆದರೆ ಈ ಬಾರಿ ಹಿನ್ನೀರು ಎಲ್ಲೆಡೆ ಹರಡಿಕೊಂಡಿದೆ. ಗರಗಂದೂರುವಿನ ರೈತರು ತಮಗಿರುವ ಜಾಗದಲ್ಲಿ ಜಾನುವಾರುಗಳನ್ನು ಸಾಕಿ ಜೀವನ ಸಾಗಿಸುತ್ತಿದ್ದು, ಈ ಬಾರಿ ಹಾರಂಗಿ ಜಲಾಶಯದ ಹಿನ್ನೀರು ಎಲ್ಲೆಡೆ ಆವರಿಸಿರುವ ಕಾರಣ ಅರೆ ಹೊಟ್ಟೆಯಲ್ಲಿ ಮೂಕ ಪ್ರಾಣಿಗಳಿಗೆ ಮೇವಿಲ್ಲದೆ ಪರದಾಡುತ್ತಿವೆ. ಸಂಬAಧಿಸಿದವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
- ರಾಜು ರೈ