ವೀರಾಜಪೇಟೆ, ಫೆ. ೮: ಗ್ರಾಮೀಣ ಭಾಗದಲ್ಲಿ ಹೆಚ್ಚು ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಬೇಕಾಗಿತ್ತು. ಕೋವಿಡ್ ಕಾರಣ ಲಾಕ್ಡೌನ್ನಿಂದಾಗಿ ಕೆಲವು ರಸ್ತೆಗಳ ಕಾಮಗಾರಿ ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದು ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು
ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ಹಾಗೂ ಕೆದಮುಳ್ಳೂರು ಪಂಚಾಯಿತಿ ವ್ಯಾಪ್ತಿಯ ಮಧ್ಯ ಭಾಗ ಲೋಕೋಪಯೋಗಿ ಇಲಾಖೆಯ ೧.೫ ಕೋಟಿ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ’ ನೆರವೇರಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಅನೇಕ ರಸ್ತೆಗಳು ದುಸ್ಥಿತಿಯಲ್ಲಿದ್ದು, ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಗುತ್ತಿಗೆದಾರರು ಕಾಮಗಾರಿ ಕಳಪೆಯಾಗದಂತೆ ಉತ್ತಮ ರೀತಿ ನಡೆಸಿ ಕೊಡುವಂತೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಹಿಂದಿನ ಸರ್ಕಾರ ಇದ್ದಾಗ ಬಹುತೇಕ ರಸ್ತೆಗಳು ದುಸ್ಥಿತಿಯಲ್ಲಿದ್ದವು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಜಿ. ಬೋಪಯ್ಯ ಅವರು ವಿಧಾನಸಭಾ ಅಧ್ಯಕ್ಷರಾಗಿದ್ದ ಸಂದರ್ಭ ಕೊಡಗಿನ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಅನುದಾನ ತಂದಿದರು. ಆ ಸಂದರ್ಭ ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಸಾಕಷ್ಟು ಕಾಮಗಾರಿಗಳು ನಡೆದಿದವು. ಸರ್ಕಾರದ ಯಾವುದೇ ಕಾಮಗಾರಿ ನಡೆಯುವ ಸಂದರ್ಭ ಗ್ರಾಮಸ್ಥರು ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಆ ಭಾಗದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿದರು. ಈ ಸಂದರ್ಭ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋದ, ಕೆದಮುಳ್ಳೂರು ಪಂಚಾಯಿತಿ ಅಧ್ಯಕ್ಷೆ ಶೀಲಾ ಮೇದಪ್ಪ, ಬಿಜೆಪಿ ಶಕ್ತಿ ಕೇಂದ್ರದ ಎ. ಹರೀಶ್ ಮತ್ತು ಅರುಣ್, ಲೋಕೋಪಯೋಗಿ ಅಭಿಯಂತರ ವೈ.ಎಸ್. ಸಿದ್ದೆಗೌಡ, ಸ್ಥಳಿಯ ಪಂಚಾಯಿತಿ ಸದಸ್ಯರಾದ ಪರಮೇಶ್ವರ, ಜಯಂತಿ, ಮಿನಾಕ್ಷಿ, ದಿನೇಶ್ ಬೋಪಣ್ಣ, ಸಿ.ಎಸ್. ಸುದೀಶ್, ಗೀತಾ, ಲಕ್ಷಿö್ಮ, ರಂಜಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.