ಮಡಿಕೇರಿ, ಫೆ. ೯: ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ರೋಗಿಗಳಿಗೆ ಹಾಗೂ ಅವರ ಮನೆಯವರಿಗೆ ಮತಪ್ರಚಾರ ಮಾಡಲು ಯತ್ನಿಸಿದ ಆರೋಪ ಮೇರೆಗೆ ಮಹಿಳೆಯನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ನಗರ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ತಾ. ೯ ರ ಸಂಜೆ ೬ ಗಂಟೆ ಸುಮಾರಿಗೆ ಶ್ರೀರಾಮಸೇನೆಯ ಪ್ರಮುಖರಾದ ವಿನಯ್ ಎಂಬವರು ತಮ್ಮ ಸ್ನೇಹಿತನ ಪತ್ನಿಯ ಆರೋಗ್ಯ ವಿಚಾರಿಸಲು ತೆರಳಿದ ಸಂದರ್ಭ ಅಲ್ಲೇ ಇದ್ದ ರೋಗಿಗಳ ಬಳಿ ಮಹಿಳೆ ತೆರಳಿ ಕರಪತ್ರ ಹಂಚಿ ಅನ್ಯಧರ್ಮಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ಧರ್ಮಗ್ರಂಥ ಹಾಗೂ ಕರಪತ್ರ ಇರುವುದು ಗೊತ್ತಾಗಿದೆ. ನಂತರ ವಿನಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮೂಲತಃ ಹಾಸನ ಜಿಲ್ಲೆಯ ಹೊಳೆನರಸಿಪುರದ ಕವಿತಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಹಿಂದೂಪರ ಸಂಘಟನೆಯ ಪ್ರಮುಖರು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್, ಇದೊಂದು ಜಾಲವಾಗಿದ್ದು, ಮತಷ್ಟು ಮಂದಿ ಮತಪ್ರಚಾರದಲ್ಲಿ ತೊಡಗಿಸಿಕೊಂಡಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಶ್ರೀರಾಮಸೇನೆಯ ಪ್ರಕಾಶ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್, ನಗರಾಧ್ಯಕ್ಷ ಸಂದೀಪ್, ಸತ್ಯ ಕರ್ಕೆರ ಸೇರಿದಂತೆ ಇನ್ನಿತರರು ಇದ್ದರು.