ಬೆಂಗಳೂರು, ಫೆ. ೮: ರಾಜ್ಯದಲ್ಲಿ ತಾರಕಕ್ಕೇರಿರುವ ಹಿಜಾಬ್ ವಿವಾದಕ್ಕೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ರಾಜ್ಯ ಉಚ್ಚ ನ್ಯಾಯಾಲಯ ವಿಚಾರಣೆಯನ್ನು ತಾ.೯ಕ್ಕೆ ಮುಂದೂಡಿದೆ. ಈ ನಡುವೆ ರಾಜ್ಯ ಸರ್ಕಾರ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಶಾಲೆ ಹಾಗೂ ಪಿಯುಸಿ, ಎಲ್ಲಾ ಪದವಿ ಕಾಲೇಜುಗಳಿಗೆ ತಾ. ೯ ರಿಂದ (ಇಂದಿನಿAದ) ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದೆ.

ಇತ್ತೀಚಿನ ಕೆಲವು ದಿನಗಳಿಂದ ರಾಜ್ಯದಲ್ಲಿ ಸೃಷ್ಟಿಯಾಗಿರುವ ಹಿಜಾಬ್ ವಿವಾದ ಹಲವೆಡೆ ಕಾಲೇಜು ವಿದ್ಯಾರ್ಥಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತಿದ್ದು, ಪ್ರತಿಭಟನೆ, ಕಲ್ಲು ತೂರಾಟದಂತಹ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿವೆ. ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಇಸ್ಲಾಂ ಸಮುದಾಯದ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜುಗಳಿಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಾದ ದಿನೇ ದಿನೇ ಕಾವೇರುತ್ತಿದೆ. ಈ ನಡುವೆ ಸರ್ಕಾರ ಹಿಜಾಬ್ ಹಾಗೂ ಕೇಸರಿ ಶಾಲು ಎರಡನ್ನೂ ಕೂಡ ಧರಿಸಿ ಕಾಲೇಜುಗಳಿಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರೂ ಕೂಡ ವಿವಾದ ಕೊನೆಗೊಳ್ಳುತ್ತಿಲ್ಲ. ಹಿಜಾಬ್ ನಮ್ಮ ಧಾರ್ಮಿಕ ಹಕ್ಕು ಎಂಬ ವಾದದೊಂದಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಮುಂದುವರಿಸುತ್ತಿದ್ದು, ಹಾಗಾದರೆ ಕೇಸರಿ ಶಾಲು ನಮ್ಮ ಸಂಸ್ಕೃತಿ ಎಂಬ ವಾದದೊಂದಿಗೆ ಹಿಂದೂ ವಿದ್ಯಾರ್ಥಿಗಳು ಅದನ್ನು ಧರಿಸಿ ಕಾಲೇಜುಗಳಿಗೆ ಬರುತ್ತಿರುವುದರಿಂದ ವಿವಾದ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಈ ಬೆಳವಣಿಗೆಗಳ ನಡುವೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಈ ಸಂಬAಧ ವಿಚಾರಣೆ ನಡೆಯಿತು. ಹಿಜಾಬ್ ಪರ ವಕೀಲ ದೇವದತ್ತ ಕಾಮತ್, ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದರು. ಹಲವು ದಿನಗಳಿಂದ ಉದ್ಭವಿಸಿರುವ ಹಿಜಾಬ್ ವಿವಾದಕ್ಕೆ ಇಂದು ನ್ಯಾಯಾಲಯದ ಮೂಲಕ ಅಂತಿಮ ತೆರೆ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತಾದರೂ, ವಾದ - ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆಯನ್ನು ತಾ.೯ಕ್ಕೆ ಮುಂದೂಡಿತು.

ಈ ನಡುವೆ ರಾಜ್ಯದ ಹಲವೆಡೆ ಈ ವಿವಾದದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾ. ೯, ೧೦ ಮತ್ತು ೧೧ರಂದು ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಪ್ರೌಢಶಾಲೆ, ಪಿಯುಸಿ, ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು, ಶಿಕ್ಷಕರು ರಾಜ್ಯದ ಶಾಂತಿ ಸುವ್ಯವಸ್ಥೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ೮ನೇ ತರಗತಿ ಇದ್ದರೆ ೧ ರಿಂದ ೮ನೇ ತರಗತಿವರೆಗೂ ಶಾಲೆ ನಡೆಯುತ್ತದೆ. ಉಳಿದಂತೆ ಎಲ್ಲಾ ವಿವಿಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಜೆ ಘೋಷಿಸಲ್ಪಟ್ಟ ದಿನಗಳಂದು ಪರೀಕ್ಷೆಗಳು ನಡೆಯುತ್ತಿದ್ದಲ್ಲಿ ಯಥಾವತ್ತಾಗಿಯೇ ನಡೆಯಲಿವೆ.