ಮಡಿಕೇರಿ, ಫೆ. ೮: ಭಾರತ ಜೂನಿಯರ್ ಬಾಲಕರ ಹಾಕಿ ಶಿಬಿರಕ್ಕೆ ಕ್ರೀಡಾ ಜಿಲ್ಲೆ ಕೊಡಗಿನ ಮೂವರು ಯುವಕರು ಆಯ್ಕೆಗೊಂಡಿದ್ದಾರೆ. ಹಾಕಿ ಇಂಡಿಯಾ ಇಂದು ತಂಡದ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ್ದು, ಕರ್ನಾಟಕದ ಒಟ್ಟು ಐದು ಮಂದಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಮೂವರು ಕೊಡಗು ಜಿಲ್ಲೆಯವರಾಗಿ ದ್ದಾರೆ. ಟಾರ್ಗೆಟ್ ಒಲಂಪಿಕ್ಸ್ ಪೋಡಿಯಂ ಸ್ಕೀಂ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಹಾಕಿ ಶಿಬಿರ ಇದೇ ಫೆಬ್ರವರಿ ೧೪ ರಿಂದ ಮಾರ್ಚ್ ೩೧ರವರೆಗೆ ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ನಡೆಯಲಿದೆ.
ಈ ಹಿಂದೆ ಹಾಕಿ ಕರ್ನಾಟಕ ಜೂನಿಯರ್ ತಂಡದ ನಾಯಕನಾಗಿದ್ದ ಚಂದುರ ಬಿ. ಪೂವಣ್ಣ, ಮೇಚಂಡ ಚಿರನ್ ಮೇದಪ್ಪ ಹಾಗೂ ಕುಪ್ಪಂಡ ಭವಿನ್ ಕುಶಾಲಪ್ಪ ಜಿಲ್ಲೆಯ ಆಟಗಾರ ರಾಗಿದ್ದಾರೆ. ಇವರೊಂದಿಗೆ ಹಾಸನ ಜಿಲ್ಲೆಯ ಮೋಹಿತ್ ಹೆಚ್.ಎಸ್. ಹಾಗೂ ಆಂಧ್ರ ಮೂಲದವರಾಗಿದ್ದು ರಾಜ್ಯದಲ್ಲಿ ನೆಲೆಸಿರುವ ಲೆಕ್ಕಲೆ ಹಿತೇಶ್ ರಾವ್ ಶಿಬಿರಕ್ಕೆ ಆಯ್ಕೆಯಾಗಿರುವ ರಾಜ್ಯ ಆಟಗಾರ ರಾಗಿದ್ದಾರೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಅಂಜಪರವAಡ ಬಿ. ಸುಬ್ಬಯ್ಯ ತಿಳಿಸಿದ್ದಾರೆ.
ತಂಡದ ಕೋಚ್ ಆಗಿ ಜಿಲ್ಲೆಯವರಾದ ಬೊಳ್ಳಪಂಡ ಜೆ. ಕಾರ್ಯಪ್ಪ ಅವರಿದ್ದು ಶಿಬಿರಕ್ಕೆ ಆಯ್ಕೆಯಾಗಿರುವ ಆಟಗಾರರು ಇವರಲ್ಲಿ ತಾ. ೧೨ರಂದು ವರದಿ ಮಾಡಿಕೊಳ್ಳಬೇಕಿದೆ.