ಮಡಿಕೇರಿ, ಫೆ. ೭: ರಾಜ್ಯದ ಹಲವೆಡೆ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ - ಕೇಸರಿ ಶಾಲು ವಿವಾದ ಕೊಡಗಿನಲ್ಲೂ ಸೃಷ್ಟಿಯಾಗಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ಇಸ್ಲಾಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ಘಟನೆ ನಡೆದಿದೆ.
ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದ ಕಾರಣ ಹಿಂದೂ ವಿದ್ಯಾರ್ಥಿಗಳು ಕೂಡ ಕೇಸರಿ ಶಾಲು ಧರಿಸಿ ಆಗಮಿಸಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು, ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಇನ್ನೂ ಸಮವಸ್ತç ನೀಡಿಲ್ಲ. ಹಾಗಾಗಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಾರೆ. ಸಮವಸ್ತç ನೀಡಿದ ಬಳಿಕ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಈ ಬಗ್ಗೆ ಕ್ರಮವಹಿಸಲು ಕೆಲ ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಿಂದೂ
(ಮೊದಲ ಪುಟದಿಂದ) ವಿದ್ಯಾರ್ಥಿಗಳು ಶಾಲು ತೆಗೆದು ಪಾಠ - ಪ್ರವಚನದಲ್ಲಿ ಪಾಲ್ಗೊಂಡರು. ಹಿಂದೂ ಸಂಘಟನೆ ಪ್ರಮುಖ ಅಜಿತ್ ಕುಮಾರ್ ಮತ್ತಿತರರು ಹಾಜರಿದ್ದರು.
ಶನಿವಾರಸಂತೆ ಪಟ್ಟಣದ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದಾಗ, ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಗತಿ ಪ್ರವೇಶಿಸದಂತೆ ತಡೆದರು. ಪೊಲೀಸರ ಸಹಕಾರದಿಂದ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಹಿಜಾಬ್ ತೆಗೆಸಿ ತರಗತಿಗೆ ಹಾಜರಾಗಲು ತಿಳಿಸಿ ವಾತಾವರಣ ತಿಳಿಗೊಳಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ವಿದ್ಯಾಸಂಸ್ಥೆಗಳಲ್ಲಿ ಧರ್ಮ ಮುಖ್ಯವಲ್ಲ; ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಸ್ತು ಮುಖ್ಯವಾಗಿದ್ದು, ಭವಿಷ್ಯದ ಕಡೆ ಗಮನಹರಿಸಬೇಕು. ಶಿಸ್ತನ್ನು ವಿದ್ಯಾರ್ಥಿಗಳು ಸ್ವಯಂ ಮೂಡಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿದರು.
ಆದರೆ, ಕೆಲವು ವಿದ್ಯಾರ್ಥಿಗಳು ಶಾಲು ಮತ್ತು ಹಿಜಾಬ್ ತೆಗೆಯಲು ನಿರಾಕರಿಸಿದಾಗ, ಕಾಲೇಜು ಆವರಣದಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಉಪನ್ಯಾಸಕರು ಪುನಃ ಎರಡೂ ಧರ್ಮಗಳ ವಿದ್ಯಾರ್ಥಿಗಳ ನಡುವೆ ಮಾತುಕತೆ ಮಾಡಿ ಮನವೊಲಿಸಿ ತರಗತಿಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಪ್ರಾಂಶುಪಾಲ ದಯಾನಂದ್, ಉಪನ್ಯಾಸಕರು, ಆಡಳಿತ ಮಂಡಳಿ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.