ಮಡಿಕೇರಿ, ಫೆ. ೮: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾಪೋಕ್ಲು ನಾಲ್ಕುನಾಡು ಎಸ್‌ಡಿಪಿಐ ಬ್ಲಾಕ್ ಅಧ್ಯಕ್ಷ ಬಿ.ಎಸ್ ಅಬೂಬಕ್ಕರ್ ಆರೋಪಿಸಿದರು.

ನಗರದ ಪ್ರತಿಕಾಭವನದಲ್ಲಿ ಮಾತನಾಡಿದ ಅವರು, ಹಿಜಾಬ್ ಹಾಕಿಕೊಂಡೇ ಕಲಿಯಬೇಕು ಎಂದಾದರೆ ಮದರಸಕ್ಕೆ ಅಥವಾ ಪಾಕಿಸ್ತಾನಕ್ಕೆ ಹೋಗಿ ಎಂದಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡನೀಯ. ಕೋಮು ಗಲಭೆ ಸೃಷ್ಠಿಸುವ ಮೂಲಕ ಸಂಸದ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ರಾಜಕೀಯ ದುರುದ್ದೇಶದಿಂದ ಧರ್ಮಗಳ ನಡುವಿನ ಸೌಹಾರ್ದತೆ ಕೆಡಿಸುತ್ತಿರುವುದು ಸರಿಯಲ್ಲ. ಮುಂದಾದರೂ ಮಾತನಾಡುವ ಮುನ್ನ ಆಲೋಚಿಸಲಿ ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವ ಬದಲು ಕೋಮು ವಿಷ ಬೀಜ ಬಿತ್ತಲೆಂದೆ ಸಂಸದರು ಕೊಡಗಿಗೆ ಬಂದಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಎಸ್‌ಡಿಪಿಐ ಕೊಟ್ಟಮುಡಿ ಅಧ್ಯಕ್ಷ ನಾಸಿರ್ ಎ.ಎ, ಹೊದವಾಡ ಅಜಾದ್‌ನಗರ ಕಾರ್ಯದರ್ಶಿ ಮಹಮ್ಮದ್ ಸಿದ್ದಿಕ್ ಉಪಸ್ಥಿತರಿದ್ದರು.