ಭಾಗಮಂಡಲ, ಫೆ. ೭: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಶಾಲೆಗಳಿಗೆ ಅಧಿಕ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹೇಳಿದರು.
ಭಾಗಮಂಡಲದ ಕೋರಂಗಾಲ ಗ್ರಾಮದ ವಾಜಪೇಯಿ ವಸತಿ ಶಾಲೆಯಲ್ಲಿ ನರೇಗಾ ಯೋಜನೆಯಡಿ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಉದ್ಯಾನವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆ ಆಗಿರುವ ಸಂಜಯ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯಾನವನ ನಿರ್ಮಾಣ ಆಗಬೇಕು ಎಂಬ ಸರ್ಕಾರದ ಸುತ್ತೋಲೆ ಇದ್ದು, ಇಲ್ಲಿ ಉತ್ತಮ ಉದ್ಯಾನವನ ಆಗಿದೆ ಎಂದರು. ಉದ್ಯಾನವನ ನಿರ್ಮಿಸಿದರೆ ಸಾಲದು. ಅದರ ನಿರ್ವಹಣೆ ಕೂಡ ಅತಿ ಅಗತ್ಯ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಮುಂದುವರೆಯುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಉದ್ಯಾನವನದ ಕೆಲಸ ಕಾರ್ಯದ ಉಸ್ತುವಾರಿಯನ್ನು ರವಿ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾಮಿತ, ಉಪಾಧ್ಯಕ್ಷ ಸತೀಶ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಂಜುನಾಥ, ಕವಿತಾ, ಡಾಕ್ಟರ್ ಕುಷ್ವಂತ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಳನ ರವಿ, ನಾಗೇಶ್, ಜಯಂತ್ ನಿತ್ಯಾನಂದ ಪಿ.ಎಂ. ರಾಜೀವ, ಅಮೆ ಬಾಲಕೃಷ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.