ಶನಿವಾರಸಂತೆ/ಮುಳ್ಳೂರು, ಫೆ. ೭: ೨೦೨೪ರ ಒಳಗೆ ದೇಶದ ಎಲ್ಲಾ ಪ್ರಜೆಗಳಿಗೂ ಸ್ವಂತ ಸೂರು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕನಸಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳೂ ಸಹ ಕಾರ್ಯೋನ್ಮುಖವಾಗಬೇಕಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಕಂದಾಯ ಇಲಾಖೆಯ ಮೂಲಕ ಸಮೀಪದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ೭೫ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಪ್ರಧಾನಿಯಾಗಿ ಪ್ರಥಮ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು, ದೇಶವಾಸಿಗಳ ಎಲ್ಲರ ಮನೆಗೂ ವಿದ್ಯುತ್ ಕಲ್ಪಿಸುವ ಗುರಿ ಹೊಂದಿ ಆ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಿದರು. ಇದೀಗ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿದ್ದು, ಮುಂದಿನ ೨೦೨೪ರ ಒಳಗೆ ಎಲ್ಲರಿಗೂ ಮನೆ ಒದಗಿಸುವ ದೂರದೃಷ್ಟಿಯ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.
ಕುಡಿಯುವ ನೀರು ಯೋಜನೆಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಈಗಾಗಲೇ ಜಿಲ್ಲೆಗೆ ೧೦೦ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ರಂಜನ್ ಹೇಳಿದರು.
ಹಲವಾರು ವರ್ಷಗಳಿಂದ ಬಡವರು ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಹಕ್ಕುಪತ್ರ ಇಲ್ಲದೆ ಒದ್ದಾಡುತ್ತಿದ್ದರು. ಇದನ್ನು ಮನಗಂಡು ಸರಕಾರವೇ ೯೪ ಸಿ ಹಾಗೂ ೯೪ ಸಿಸಿ ಅಡಿಯಲ್ಲಿ ದಾಖಲೆ ಒದಗಿಸಲು ಕ್ರಮ ಕೈಗೊಂಡಿದೆ. ಒಂದೂವರೆ ಸೆಂಟ್ ನಿಂದ ೯ ಸೆಂಟ್ವರೆಗಿನ ಜಾಗಕ್ಕೆ ದಾಖಲಾತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ೩೯೫ ಮಂದಿಗೆ ಹಕ್ಕುಪತ್ರ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಕೆಲವರು ಸರ್ಕಾರ ನಿಗದಿಪಡಿಸಿ ಹಣ ಇಂದಿಗೂ ಕಟ್ಟಿಲ್ಲ. ತಕ್ಷಣ ಹಣ ಕಟ್ಟಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದ ಶಾಸಕರು, ಜಾಗಕ್ಕೆ ದಾಖಲೆಗಳಿದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ತಾಲೂಕಿನಲ್ಲಿ ೬೦೦೦ ಕ್ಕೂ ಅಧಿಕ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಯಿಂದ ವಿವಿಧ ಕಾರಣ ನೀಡಿ ತಿರಸ್ಕರಿಸಲಾಗಿದೆ. ಇದೀಗ ಸಿ ಮತ್ತು ಡಿ ಲ್ಯಾಂಡ್ನಲ್ಲೂ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಿರಸ್ಕೃತಗೊಂಡಿರುವ ಹಕ್ಕುಪತ್ರಗಳನ್ನು ಪುನರ್ಪರಿಶೀಲನೆ ನಡೆಸಿ ವಿಲೇವಾರಿಗೆ ಕ್ರಮವಹಿಸಲಾಗುವುದು. ಊರುಡುವೆ ಪೈಸಾರಿ ಇದ್ರೆ ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ಹಕ್ಕುಪತ್ರ ಪಡೆದುಕೊಳ್ಳಬಹುದು. ಈ ಯೋಜನೆಯಡಿ ಬಜೆಗುಂಡಿಯಲ್ಲಿ ೩೯೫ ಮಂದಿಗೆ ಹಕ್ಕುಪತ್ರ ಒದಗಿಸಲಾಗಿದೆ ಎಂದರು.
ಫಲಾನುಭವಿಗಳು ವಾಸಕ್ಕೆ ಯೋಗ್ಯವಾದ ರೀತಿಯಲ್ಲಿ ಮನೆ ನಿರ್ಮಿಸಿಕೊಳ್ಳಬೇಕು. ಅದನ್ನು ಸುಂದರವಾಗಿಟ್ಟುಕೊಳ್ಳಬೇಕು. ಹಕ್ಕುಪತ್ರವನ್ನು ೨೫ ವರ್ಷದವರೆಗೆ ಮಾರಾಟ ಮಾಡುವಂತಿಲ್ಲ. ಬ್ಯಾಂಕ್ನಿAದ ಸಾಲ ಸೌಲಭ್ಯ ಪಡೆಯಬಹುದು. ೯/೧೧ ಅಡಿಯಲ್ಲಿ ಖಾತಾ ಮಾಡಿಸಿಕೊಳ್ಳಬೇಕು. ಮಾರ್ಚ್ ೩೧ ರ ಒಳಗೆ ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ೧೬೯ ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ೯೩ ಮಂದಿ ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿಲ್ಲ. ಇಂತಹ ಮಂದಿಗೆ ನೋಟೀಸ್ ನೀಡಿದ್ದೇವೆ. ಹಣ ಕಟ್ಟಿದ ನಂತರ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್, ಗ್ರಾಮ ಲೆಕ್ಕಾಧಿಕಾರಿ ವಿಶ್ವವಾಣಿ, ರಜಾಕ್, ಸಂತೋಷ್, ಕಂದಾಯ ಪರಿವೀಕ್ಷಕ ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.