ಮಡಿಕೇರಿ, ಫೆ. ೬: ಪ್ರವಚನಕಾರ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲೇಖಕ ಮತ್ತು ಕಲಾವಿದರ ಬಳಗ ಸಂತಾಪ ಸೂಚಿಸಿತು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸಂತಾಪ ಸಭೆಯಲ್ಲಿ ಪದಾಧಿಕಾರಿಗಳು ಸಮಾನತೆಯನ್ನು ಬೋಧಿಸಿದ ಕನ್ನಡದ ಕಬೀರ ಸುತಾರ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಮಾಜ ಸುಧಾರಣೆಗಾಗಿ ಇಬ್ರಾಹಿಂ ಸುತಾರ ಅವರು ನೀಡಿದ ಭಾವೈಕ್ಯತೆಯ ಸಂದೇಶವನ್ನು ನಾವೆಲ್ಲರು ಅನುಸರಿಸಬೇಕಾಗಿದೆ ಎಂದರು.

ಕಸಾಪ ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ಬೇಬಿಮ್ಯಾಥ್ಯು ಮಾತನಾಡಿ ಇಬ್ರಾಹಿಂ ಸುತಾರ ಅವರ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಪರಿಷತ್‌ನ ಮಡಿಕೇರಿ ತಾಲೂಕು ನೂತನ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಕಾರ್ಯದರ್ಶಿ ರೇವತಿ ರಮೇಶ್, ಸದಸ್ಯ ಆರ್.ಪಿ.ಚಂದ್ರಶೇಖರ್ ಲೇಖಕರ ಬಳದ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತ ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ನಿರೂಪಿಸಿ ವಂದಿಸಿದರು.

ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ತೀವ್ರ ಸಂತಾಪ ಸೂಚಿಸಿದ್ದಾರೆ.