ಕುಶಾಲನಗರ, ಫೆ. ೬: ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮೃತ ಗಾನಕೋಗಿಲೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿ, ಹಿಂದಿ ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಏಳು ದಶಕಗಳ ಸುದೀರ್ಘ ಕಾಲ ಸಂಗೀತ ಲೋಕದಲ್ಲಿ ರಾರಾಜಿಸಿದ ಲತಾ ಮಂಗೇಶ್ಕರ್ ಅಗಲಿಕೆ ಕೇವಲ ಭಾರತ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಸಂಗೀತ ಸಾಮ್ರಾಜ್ಞೆ ಎಂ.ಎಸ್. ಸುಬ್ಬಲಕ್ಷಿö್ಮಯ ನಂತರ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಲತಾ ಮಂಗೇಶ್ಕರ್ ಸಂಗೀತದಲ್ಲಿ ವಿಶ್ವದಾಖಲೆ ದಾಖಲಿಸಿದ್ದರು ಎಂದು ಸ್ಮರಿಸಿದರು. ಕಸಾಪ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕಸಾಪ ಸದಸ್ಯರಾದ ಸೂದನ ರತ್ನಾವತಿ, ಟಿ.ಜಿ. ಶೈಲಾ, ಎನ್.ಕೆ. ಮೋಹನಕುಮಾರ್, ಕೃಷ್ಣಪ್ರಸಾದ್, ನರೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಎಸ್. ಆನಂದಕುಮಾರ್, ಕೆ.ಜಿ. ಮನು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ತಾರಾನಾಥ್ ಇದ್ದರು. ಇದೇ ಸಂದರ್ಭ ಭರತ ನಾಟ್ಯ ಪ್ರವೀಣೆ ಕಸಾಪ ಸದಸ್ಯೆಯೂ ಆದ ಮಂಜು ಭಾರ್ಗವಿ ಲತಾ ಮಂಗೇಶ್ಕರ್ ಅವರಿಗೆ ಗಾಯನ ನಮನ ಸಲ್ಲಿಸಿದರು.