ಮಡಿಕೇರಿ, ಫೆ. ೬: ತಲಕಾವೇರಿ ಹಾಗೂ ಭಾಗಮಂಡಲ ವ್ಯವಸ್ಥಾಪನಾ ಸಮಿತಿಗೆ ಇದೀಗ ೯ ಮಂದಿ ಸದಸ್ಯರನ್ನು ನೇಮಕ ಮಾಡಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆದರೆ, ಈ ಸಮಿತಿಗೆ ಕೊಡವ ಹಾಗೂ ಅಮ್ಮ ಕೊಡವ ಜನಾಂಗವನ್ನು ಕತ್ತಲೆಯಲ್ಲಿಟ್ಟು ಜನಪ್ರತಿನಿಧಿಗಳು ತಮಗೆ ಬೇಕಾದವರನ್ನು ನೇಮಿಸಿ ಕೊಂಡಿದ್ದಾರೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆರೋಪಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಒಂದು ಜನಾಂಗ ಹಾಗೂ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಈ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಕೂಡಲೆ ಇದನ್ನು ಪುನರ್ ಪರಿಶೀಲನೆ ಮಾಡಿ ಸರಿಪಡಿಸದಿದ್ದರೆ ಕಾನೂನೂ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇಬ್ಬರು ಕೊಡವರು ಹಾಗೂ ಮತ್ತೊಬ್ಬರು ಅಮ್ಮ ಕೊಡವರಿಗೆ ಅವಕಾಶ ಕೊಡುವ ಮೂಲಕ ದಕ್ಷಿಣ ಕೊಡಗಿಗೆ ಅವಕಾಶ ಮಾಡಿ ಕೊಡಬೇಕಿದೆ. ಹಾಗೆ ತಕ್ಕಾಮೆ ಅರೆಭಾಷಿಕ ಗೌಡ ಜನಾಂಗದಲ್ಲಿ ಇರುವ ಕಾರಣ ಕೊಡವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಾಮರಸ್ಯಕ್ಕೆ ನಾಂದಿ ಹಾಡಬೇಕಿದೆ ಎಂದು ಅವರು ಆಶಿಸಿದ್ದಾರೆ.