ಸೋಮವಾರಪೇಟೆ, ಫೆ. 5: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಸಂಬಂಧಿಸಿ ದಂತೆ 140 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ, ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 84 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 88.60 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ವರ್ಷಗಳಲ್ಲಿ ಭಾರೀ ಮಳೆಯಿಂದಾಗಿ ಗ್ರಾಮೀಣ ಭಾಗದ ಹಲವಷ್ಟು ರಸ್ತೆಗಳು ಹಾಳಾಗಿದ್ದು, ಇವುಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಿದೆ ಎಂದರು.

ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಎನ್‍ಡಿಆರ್‍ಎಫ್ ಯೋಜನೆಯಡಿ 9.60 ಕೋಟಿ, ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖೆಯಡಿ ತಲಾ 10 ಕೋಟಿ, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ನೀರಾವರಿ ಕಾಮಗಾರಿಗಳಿಗೆ 55 ಕೋಟಿ ಸೇರಿದಂತೆ ಒಟ್ಟು 84.60 ಕೋಟಿ ವೆಚ್ಚದ ಕಾಮಗಾರಿಗಳಿಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದು, ಹಲವು ಭಾಗದಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಎಂದು ಮಾಹಿತಿಯಿತ್ತರು.

ಮುಂದಿನ ದಿನಗಳಲ್ಲಿ ಮಾದಾಪುರ, ಹರದೂರು, ಬ್ಯಾಡಗೊಟ್ಟ, ಗರ್ವಾಲೆ, ಕೊಡ್ಲಿಪೇಟೆ, ಬೆಸೂರು, ಹೆಬ್ಬಾಲೆ, (ಮೊದಲ ಪುಟದಿಂದ) ಶಿರಂಗಾಲ, ತೊರೆನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 4.27 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ರಂಜನ್ ತಿಳಿಸಿದರು. ಕಾವೇರಿ ನೀರಾವರಿ ನಿಗಮದಿಂದ ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 17 ಕೋಟಿ ಹಾಗೂ ಹೆಬ್ಬಾಲೆ, ಶಿರಂಗಾಲ, ತೊರೆನೂರಿಗೆ 22 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಟೆಂಡರ್ ಆದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಇದರೊಂದಿಗೆ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ 50 ಕೋಟಿ ಅನುದಾನ ಒದಗಿಸಿದ್ದು, ಗ್ರಾಮೀಣ ಪ್ರದೇಶದ ರಸ್ತೆಗಳಿಗೆ 20 ಕೋಟಿ ವಿನಿಯೋಗಿಸ ಲಾಗುವುದು. ಲೋಕೋಪಯೋಗಿ ಇಲಾಖೆಗೆ 20 ಕೋಟಿ ಅನುದಾನ ನೀಡಲಾಗಿದೆ. ಸೋಮವಾರಪೇಟೆ-ಕುಶಾಲನಗರ ಪ.ಪಂ.ಗಳಿಗೆ ತಲಾ 5 ಕೋಟಿ, ಮಡಿಕೇರಿ ನಗರ ಸಭೆಗೆ 5 ಕೋಟಿ ವಿಶೇಷ ಪ್ಯಾಕೇಜ್, ನಗರೋತ್ಥಾನ ಯೋಜನೆಯಡಿ 40 ಕೋಟಿ ಅನುದಾನ ಮಂಜೂರಾಗಿದೆ ಎಂದು ರಂಜನ್ ತಿಳಿಸಿದರು.

ಈ ಹಿಂದಿನ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪ ಅವರು ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದರು. ಇದನ್ನು ಈಗಿನ ಮುಖ್ಯಮಂತ್ರಿಗಳೂ ಮುಂದುವರೆಸಿ ದ್ದಾರೆ. ಸರ್ವ ಋತು ರಸ್ತೆಗಳ ನಿರ್ಮಾಣದ ಉದ್ದೇಶದಿಂದ ಎಲ್ಲಾ ಕಾಲೋನಿಗಳಲ್ಲೂ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳೀಯರು ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಕಳಪೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ 88.60 ಲಕ್ಷ ಅನುದಾನ ನೀಡಲಾಗಿದೆ. ಕುಡಿಯುವ ನೀರು ಯೋಜನೆಗೆ 1.25 ಕೋಟಿ ಒದಗಿಸಲಾಗಿದೆ. ಸ್ವಚ್ಛಭಾರತ್ ಮಿಷನ್ ಯೋಜನೆಯಡಿ 11.50 ಲಕ್ಷ ವೆಚ್ಚದಲ್ಲಿ ಆಧುನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ನಿತಿನ್, ಸದಸ್ಯರಾದ ಕಾಂತರಾಜು, ದೇವರಾಜ್, ಗೋಪಿಕ, ಮನು ಮಹಾಂತೇಶ್, ನಂದಿನಿ, ಭಾಗ್ಯ, ಅಭಿವೃದ್ಧಿ ಅಧಿಕಾರಿ ಮೇದಪ್ಪ, ಪ್ರಮುಖರಾದ ಸವಿತ ಸತೀಶ್, ಭುವನೇಶ್ವರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.