ಸೋಮವಾರಪೇಟೆ, ಫೆ. ೪: ೫೦ ವರ್ಷಗಳನ್ನು ಪೂರೈಸಿರುವ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅದ್ಧೂರಿ ಆಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨ ವರ್ಷಗಳ ಹಿಂದೆಯೇ ಸುವರ್ಣ ಮಹೋತ್ಸವ ಸಮಾರಂಭ ನಡೆಸಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು. ಮಹೋತ್ಸವ ಸಮಾರಂಭದ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಮಹೋತ್ಸವ ಅಂಗವಾಗಿ ಜನಾಂಗ ಬಾಂಧವರಿಗೆ ಸಾಂಸ್ಕೃತಿಕ ಉತ್ಸವ, ಕ್ರೀಡಾಕೂಟ, ದಾನಿಗಳಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉಪ ಸಮಿತಿಗಳನ್ನು ರಚಿಸಲಾಗುವುದು. ಜನಾಂಗ ಬಾಂಧವರನ್ನು ಒಂಡೆದೆ ಸೇರಿಸುವ ಮೂಲಕ ಅದ್ಧೂರಿಯಾಗಿ ಮಹೋತ್ಸವ ಆಚರಿಸಲಾಗುವುದು ಎಂದು ಮಾಹಿತಿಯಿತ್ತರು.
ಸಮುದಾಯ ಭವನ, ವಿದ್ಯಾಸಂಸ್ಥೆ ಸೇರಿದಂತೆ ಸುಮಾರು ೧೪ ಕೋಟಿಯಷ್ಟು ಆಸ್ತಿ ಹೊಂದಿರುವ ಸೋಮವಾರಪೇಟೆ ಒಕ್ಕಲಿಗರ ಸಂಘದ ಬೆಳವಣಿಗೆಗೆ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ದಾನಿಗಳು, ಹೊರ ಜಿಲ್ಲೆಯ ದಾನಿಗಳು ನೆರವು ಒದಗಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ೭೦ ಲಕ್ಷ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ ೩೫ ಲಕ್ಷ ಸೇರಿದಂತೆ ಶಾಸಕ ಅಪ್ಪಚ್ಚುರಂಜನ್, ಮಾಜಿ ಶಾಸಕ ಜೀವಿಜಯ, ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಇತರರೂ ಅನುದಾನ ಒದಗಿಸಿದ್ದಾರೆ ಎಂದು ಮುತ್ತಣ್ಣ ತಿಳಿಸಿದರು.
ಸಂಘದ ವತಿಯಿಂದ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ೮೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಲಾಭದ ನಿರೀಕ್ಷೆ ಮಾಡದೇ ಶೈಕ್ಷಣಿಕ ಸೇವೆ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಶಾಲೆಯು ಕಳೆದ ೪ ವರ್ಷಗಳಿಂದ ಶೇ.೧೦೦ ಫಲಿತಾಂಶ ದಾಖಲಿಸುತ್ತಿದೆ. ಎಲ್ಲಾ ಜನಾಂಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಮುAದಿನ ದಿನಗಳಲ್ಲಿ ವಿದ್ಯಾರ್ಥಿ ವಸತಿ ನಿಲಯ ಪ್ರಾರಂಭಕ್ಕೆ ಚಿಂತನೆ ನಡೆಸಿದ್ದು, ಸರ್ಕಾರದೊಂದಿಗೆ ರಾಜ್ಯ ಒಕ್ಕಲಿಗರ ಸಂಘ, ಒಕ್ಕಲಿಗರ ಅಭಿವೃದ್ಧಿ ನಿಗಮವೂ ನೆರವು ನೀಡುವ ನಿರೀಕ್ಷೆಯಿದೆ. ತಾ. ೧೨ರಂದು ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಅವರು ಸಂಘದ ಸಮುದಾಯ ಭವನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ಒದಗಿಸಿದರು.
ಸಂಘದ ನಿರ್ದೇಶಕ ಹಾಗೂ ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಮಾತನಾಡಿ, ಆರಂಭದಲ್ಲಿ ಸಿ.ಕೆ. ಕಾಳಪ್ಪ ಅವರು ಸಂಘಕ್ಕೆ ಬುನಾದಿ ಹಾಕಿದ್ದು, ಕಳೆದ ೨೭ ವರ್ಷಗಳಿಂದ ಎ.ಆರ್. ಮುತ್ತಣ್ಣ ಅವರ ನೇತೃತ್ವದಲ್ಲಿ ಒಕ್ಕಲಿಗರ ಸಂಘ ಬಲಿಷ್ಠವಾಗಿ ಬೆಳೆದಿದೆ ಎಂದರು.
ಕಾರ್ಯದರ್ಶಿ ಗಣಪತಿ ಮಾತನಾಡಿ, ಸಂಘದಲ್ಲಿ ಒಟ್ಟು ೨೫ ಮಂದಿ ನಿರ್ದೇಶಕರಿದ್ದಾರೆ. ಇದೀಗ ಹೊಸದಾಗಿ ೯ ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು, ಕುಶಾಲನಗರಕ್ಕೆ ಒಂದು ಸ್ಥಾನ ಮೀಸಲಿಡಲಾಗಿದೆ. ಕುಶಾಲನಗರ ಪ್ರತ್ಯೇಕ ತಾಲೂಕು ಆಗಿರುವುದರಿಂದ ಮುಂದಿನ ದಿನಗಳಲ್ಲಿ ಆ ಭಾಗದಿಂದ ಸದಸ್ಯತ್ವ ಪಡೆಯುವುದಿಲ್ಲ. ಈಗಾಗಲೇ ಇರುವವರು ಸಂಘದಲ್ಲಿ ಮುಂದುವರೆಯಲಿದ್ದಾರೆ ಎಂದರು. ಗೋಷ್ಠಿಯಲ್ಲಿ ನಿರ್ದೇಶಕರಾದ ಕೆ.ಟಿ. ಪರಮೇಶ್, ನಂದಕುಮಾರ್ ಉಪಸ್ಥಿತರಿದ್ದರು.