ಕುಶಾಲನಗರ, ಫೆ. ೪: ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕುಶಾಲನಗರದ ಕೆ.ಎಸ್. ಮೂರ್ತಿ ಅವರನ್ನು ಕುಶಾಲನಗರದ ಸಾಹಿತ್ಯಾಸಕ್ತರ ಬಳಗದ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು. ಕ.ಸಾ.ಪ. ಜಿಲ್ಲಾ ಸಮಿತಿ ನಿರ್ದೇಶಕರೂ ಆದ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಎಂ.ಎನ್. ವೆಂಕಟನಾಯಕ್ ಮಾತನಾಡಿ, ನಾಡಿನ ಕನ್ನಡ ಸಾರಸ್ವತ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.) ಕನ್ನಡ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆ. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಜನಸಾಮಾನ್ಯರೆಡೆಗೆ ಕೊಂಡೊಯ್ಯುವ ಮೂಲಕ ಕನ್ನಡ ಚಟುವಟಿಕೆಗಳಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಸೋಮವಾರಪೇಟೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಕಸಾಪ ಚಟುವಟಿಕೆಗಳು ಹಳ್ಳಿಯೆಡೆಗೆ ಹಾಗೂ ಶಾಲಾ-ಕಾಲೇಜುಗಳ ಕಡೆಗೆ ಕೊಂಡೊಯ್ಯುವ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದರೊಂದಿಗೆ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದರು.
ಕಸಾಪ ಹೋಬಳಿ ಮಾಜಿ ಅಧ್ಯಕ್ಷ ಎನ್.ಕೆ. ಮೋಹನಕುಮಾರ್, ಕಸಾಪ ಸದಸ್ಯರಾದ ಕೆ.ಎಸ್. ಮಹೇಶ್, ಸುರೇಶ್ ಅವರೆದಾಳ್, ಹೆಚ್.ಎನ್. ಸುಬ್ರಮಣ್ಯ, ಎಂ.ಎನ್. ಮೂರ್ತಿ ಮಾತನಾಡಿದರು. ಕಸಾಪ ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯ ಕೆ.ವಿ. ಉಮೇಶ್ ಹೆಬ್ಬಾಲೆ, ಸದಸ್ಯ ರಾಜಾಚಾರ್, ಶಿಕ್ಷಕರಾದ ಟಿ.ಬಿ. ಮಂಜುನಾಥ್ ಸಿ.ಡಿ. ಲೋಕೇಶ್ ಇದ್ದರು.