ಗೋಣಿಕೊಪ್ಪಲು.ಫೆ.೫: ಕೋವಿಡ್ ಸಂದರ್ಭ ಬ್ಯಾಂಕಿನಿAದ ಸಾಲ ಪಡೆದ ಸದಸ್ಯರು ನಿಗದಿತ ಸಮಯದಲ್ಲಿ ಸಾಲವನ್ನು ಮರು ಪಾವತಿಸಲು ಸಾಧ್ಯವಾಗಿಲ್ಲ. ಇದೀಗ ಪಡೆದ ಸಾಲವನ್ನು ಹಂತ ಹಂತವಾಗಿ ನಿಯಮಾನುಸಾರ ವಾಪಸ್ಸು ಪಡೆಯಲಾಗುತ್ತಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್ ಉತ್ತಮ ಲಾಭಾಂಶ ಪಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ತಿಳಿಸಿದರು.
ಗೋಣಿಕೊಪ್ಪಲುವಿನ ದಿ ಮರ್ಚೆಂಟ್ಸ್ ಕೋ ಆಪರೇಟಿವ್ ಸೊಸೈಟಿಯ ವಿಶೇಷ ಮಹಾಸಭೆಯು ಶನಿವಾರ ಉಮಾಮಹೇಶ್ವರಿ ದೇವಾಲಯದ ಆವರಣದ ಸಭಾಂಗಣದಲ್ಲಿ ಕಿರಿಯಮಾಡ ಅರುಣ್ ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರುಣ್ ಪೂಣಚ್ಚ ಸಂಘದ ಸದಸ್ಯರ ಹಿತವನ್ನು ಕಾಪಾಡಲು ಸಂಘವು ಕಟಿಬದ್ದವಾಗಿದ್ದು ಆಂತರಿಕ ಲೆಕ್ಕ ಪರಿಶೋಧಕರು ಹಾಗೂ ಚಾರ್ಟೆಡ್ ಅಕೌಂಟೆAಟ್ ಒಟ್ಟಾಗಿ ಸೇರಿ ಬ್ಯಾಂಕಿನ ಲೆಕ್ಕವನ್ನು ಪರಿಶೀಲಿಸಿ ಹಲವು ನ್ಯೂನತೆಗಳನ್ನು ೨೦೨೩ರೊಳಗೆ ಸರಿ ಪಡಿಸಿ ಮಹಾಸಭೆಗೆ ವರದಿ ನೀಡಲಾಗುವುದೆಂದು ತಿಳಿಸಿದರು.
ಸಂಘದ ಸದಸ್ಯರಾದ ಗಣೇಶ್ರೈ, ಪಿ.ಕೆ. ಪ್ರವೀಣ್, ಎಸ್.ಎಸ್. ಸುರೇಶ್, ಕೊಲ್ಲೀರ ಗೋಪಿ ಚಿಣ್ಣಪ್ಪ, ಗುಮ್ಮಟ್ಟೀರ ದರ್ಶನ್, ಕೊಲ್ಲೀರ ಉಮೇಶ್ ಹಾಗೂ ವಸಂತ ಅವರು ಸಭೆಯಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಬ್ಯಾಂಕಿನ ಆಡಳಿತ ವಿಚಾರದಲ್ಲಿ ಯಾರೇ ಹಸ್ತಕ್ಷೇಪ ನಡೆಸಿದರು ಅವರ ಮೇಲೆ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲು ಮಹಾಸಭೆ ಒಪ್ಪಿಗೆ ನೀಡಿದೆ. ಕಠಿಣ ನಿರ್ಧಾರಗಳನ್ನು ಕೈಗೊಳ್ಳದಿದ್ದಲ್ಲಿ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿಲ್ಲ. ಹಲವು ದಶಕಗಳ ಇತಿಹಾಸವಿರುವ ಬ್ಯಾಂಕನ್ನು ಲಾಭದಾಯಕವಾಗಿ ಮುನ್ನಡೆಸುವ ಜವಾಬ್ದಾರಿ ಆಡಳಿತ ಮಂಡಳಿಯ ಪ್ರತಿ ನಿರ್ದೇಶಕರದ್ದಾಗಿದೆ. ಈ ನಿಟ್ಟಿನಲ್ಲಿ ಮುಂದೆ ಪಾರದರ್ಶಕತೆಯನ್ನು ಕಾಪಾಡಿಕೊಂಡು ಸಂಘವು ಮುನ್ನಡೆಯಲಿ ಎಂದು ಸೂಚಿಸಿದರು.
ಸದಸ್ಯರ ಮಾತಿಗೆ ಉತ್ತರಿಸಿದ ಅಧ್ಯಕ್ಷರು ಕಳೆದ ಮಾರ್ಚ್ ತಿಂಗಳಿನಿAದ ಪ್ರತಿ ತಿಂಗಳು ನುರಿತ ಆಂತರಿಕ ಲೆಕ್ಕಪರಿಶೋಧಕರಿಂದ ಸಂಘದ ಲೆಕ್ಕಗಳನ್ನು ಪರಿಶೀಲಿಸಲಾಗುತ್ತಿದೆ. ಸಾಕಷ್ಟು ನ್ಯೂನತೆಗಳನ್ನು ಪತ್ತೆಹಚ್ಚಲಾಗಿದೆ. ಈಗಾಗಲೇ ಸಾಲ ಮರುಪಾವತಿ ಮಾಡದವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಹಲವು ಪ್ರಕರಣಗಳು ನ್ಯಾಯಲಯದಲ್ಲಿವೆ. ಹಲವು ಸದಸ್ಯರಿಗೆ ಬಡ್ಡಿ ರಿಯಾಯಿತಿ ನೀಡಿ ಸಾಲವನ್ನು ಮರು ಪಾವತಿ ಮಾಡಿಸಲಾಗಿದೆ. ಇದರಿಂದ ಸಾಕಷ್ಟು ಸಾಲ ಮರು ಪಾವತಿಯಾಗಿದೆ. ಉಳಿದ ಶೇಕಡವಾರು ಸಾಲದ ಹಣವು ಮುಂದಿನ ಸಾಲಿನಲ್ಲಿ ಮರು ಪಾವತಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಸಾಲ ಮರುಪಾವತಿಯಲ್ಲಿ ಆಡಳಿತ ಮಂಡಳಿ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಮಧ್ಯೆ ಪ್ರವೇಶಿಸಿ ಮಾತನಾಡಿದ ಕೆಲ ಸದಸ್ಯರು ಬ್ಯಾಂಕಿನ ಲೆಕ್ಕಚಾರ ವಿಚಾರದಲ್ಲಿ ಸಿಬ್ಬಂದಿಗಳು ತಪ್ಪು ಮಾಡಿರುವುದು ಆಡಳಿತ ಮಂಡಳಿಯ ಗಮನಕ್ಕೆ ಬಂದಲ್ಲಿ ಕೂಡಲೇ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಮಾನತಿನಲ್ಲಿಟ್ಟು ಕ್ರಮಕ್ಕೆ ಮುಂದಾಗಬೇಕು ಹಾಗೂ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಿಸಬೇಕು ಹೀಗಾದಲ್ಲಿ ಮಾತ್ರ ಸಂಘ ಮುಂದುವರೆಯಲು ಸಾಧ್ಯ ಎಂದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಅಂತಹ ಸಿಬ್ಬಂದಿಗಳ ಮೇಲೆ ಆಡಳಿತ ಮಂಡಳಿ ಕ್ರಮ ಜರುಗಿಸಿದೆ.ಸಂಬAಧಿಸಿದ ಇಲಾಖೆಯವರಿಗೂ ದೂರು ನೀಡಲಾಗಿದೆ. ಹಂತಹAತವಾಗಿ ಕ್ರಮ ಜರುಗಿಸಲಾಗುವುದು. ಸಮಯಾವಕಾಶ ನೀಡುವಂತೆ ಮಹಾಸಭೆಗೆ ಮನವಿ ಮಾಡಿದರು ಮಹಾ ಸಭೆಯು ಇದಕ್ಕೆ ಒಪ್ಪಿಗೆ ಸೂಚಿಸಿತು. ಬ್ಯಾಂಕಿನ ಮೇಲೆ ಆಧಾರ ರಹಿತ ಆರೋಪ ಮಾಡುವವರÀ ಮೇಲೆ ಕಠಿಣ ನಿರ್ಧಾರ ಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಬೇಕೆAದು ಮಹಾಸಭೆಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್. ಪ್ರಕಾಶ್, ಎನ್.ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ಎ.ಜೆ. ಬಾಬು, ಹೆಚ್.ಎನ್. ಮುರುಗನ್, ಸುಮಿ ಸುಬ್ಬಯ್ಯ, ಗಿರೀಶ್ ಗಣಪತಿ, ಸಿ.ಡಿ. ಮಾದಪ್ಪ, ಪಿ.ಜಿ. ರಾಜಶೇಖರ್, ಕೆ.ಪಿ. ಪ್ರಶಾಂತ್ ಹಾಗೂ ಕೆ.ಬಿ. ಪ್ರತಾಪ್, ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಂದ ವರದಿ ವಾಚಿಸಿದರು. ನಿರ್ದೇಶಕಿ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು.