ಸೋಮವಾರಪೇಟೆ, ಫೆ. ೫: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ೪ ಡಯಾಲಿಸಿಸ್ ಯಂತ್ರಗಳು ಆಗಮಿಸಿದ್ದು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಸಮಾಧಾನ ತಂದಿದೆ. ಶಾಸಕ ಅಪ್ಪಚ್ಚುರಂಜನ್ ಅವರ ಅನುದಾನದಿಂದ ೨ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೨ ನೂತನ ಯಂತ್ರಗಳು ಡಯಾಲಿಸಿಸ್ ವಿಭಾಗಕ್ಕೆ ಆಗಮಿಸಿವೆ.

ಕಳೆದ ತಾ. ೨ರಂದು ರಾಜ್ಯ ಆರೋಗ್ಯ ಇಲಾಖೆ ಮೂಲಕ ನೂತನವಾಗಿ ೧ ಡಯಾಲಿಸಿಸ್ ಯಂತ್ರ ಆಗಮಿಸಿದ್ದು, ಇದೀಗ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಇರುವ ನೂತನ ಯಂತ್ರಗಳ ಸಂಖ್ಯೆ ೫ಕ್ಕೇರಿದೆ. ಆ ಮೂಲಕ ಚಿಕಿತ್ಸೆಗೆ ಒಳಗಾಗುತ್ತಿರುವ ೨೨ ರೋಗಿಗಳ ಮೊಗದಲ್ಲಿ ಸಮಾಧಾನ ಮೂಡಿಸಿದೆ.

ಈಗಾಗಲೇ ಇರುವ ಮೂರು ಯಂತ್ರಗಳಲ್ಲಿ ೧ ಯಂತ್ರ ಸಂಪೂರ್ಣ ಹಾಳಾಗಿದ್ದು, ಉಳಿದಿರುವ ೨ ಯಂತ್ರಗಳಲ್ಲಿಯೂ ಆಗಾಗ್ಗೆ ತಾಂತ್ರಿಕ ಸಮಸ್ಯೆ ಕಂಡುಬರುತ್ತಿರುವುದರಿAದ ರೋಗಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಿಸಿ ಶಾಸಕರು ಹಾಗೂ ಇಲಾಖೆಯ ಗಮನ ಸೆಳೆಯಲಾಗಿತ್ತು.

ವರದಿ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು ಸ್ಪಂದನೆ ನೀಡಿದ್ದು, ತಮ್ಮ ಶಾಸಕರ ನಿಧಿಯಿಂದ ೨ ಹಾಗೂ ಇಲಾಖೆಯ ಮೂಲಕ ನೂತನವಾಗಿ ೩ ಯಂತ್ರಗಳನ್ನು ಆಸ್ಪತ್ರೆಗೆ ತರಿಸಿದ್ದಾರೆ.

ನೂತನವಾಗಿ ೫ ಯಂತ್ರಗಳನ್ನು ಡಯಾಲಿಸಿಸ್ ಘಟಕಕ್ಕೆ ತಂದಿದ್ದು, ಶಾಸಕ ಅಪ್ಪಚ್ಚುರಂಜನ್ ಅವರು ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ಕಂಪೆನಿಯ ಸಿಬ್ಬಂದಿಗಳು ಆಗಮಿಸಿ ಯಂತ್ರಗಳನ್ನು ಅಳವಡಿಕೆ ಮಾಡಬೇಕಿದೆ. ಒಟ್ಟಾರೆಯಾಗಿ ಆಸ್ಪತ್ರೆಯಲ್ಲಿ ೮ ಯಂತ್ರಗಳಿದ್ದು, ಇದರಲ್ಲಿ ೧ ಯಂತ್ರ ಸಂಪೂರ್ಣ ದುರಸ್ತಿಗೊಳಪಟ್ಟಿದೆ. ಉಳಿದ ೨ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳಲು ಕ್ರಮ ವಹಿಸಲಾಗುವುದು. ಇದರೊಂದಿಗೆ ಹೆಚ್ಚುವರಿಯಾಗಿ ಆರ್.ಓ. ಪ್ಲಾಂಟ್ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.