ಮಡಿಕೇರಿ ಫೆ.೩ : ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ತಮ್ಮ ಭಾಷಣಗಳಲ್ಲಿ ಸುಮಾರು ೨೩ ಬಾರಿ ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಕಂಡ ಅಪ್ರತಿಮ ಸೇನಾನಿಗೆ ಭಾರತ ರತ್ನ ನೀಡದೆ ಕೊಡಗಿನ ಜನರನ್ನು ನಿರಾಶೆಗೊಳಿಸಿದ್ದಾರೆ. ಅಲ್ಲದೆ ಬಜೆಟ್ ನಲ್ಲಿ ಕೂಡ ಕೇಂದ್ರ ಸರ್ಕಾರ ಕಾಫಿ ನಾಡನ್ನು ನಿರ್ಲಕ್ಷಿಸಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೀರ ಸೇನಾನಿಗಳಾದ ಕೊಡಗಿನ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳು ಪ್ರಧಾನಮಂತ್ರಿಗಳ ಹೊಗಳಿಕೆಯ ಭಾಷಣಗಳಿಗಷ್ಟೇ ಸೀಮಿತವಾಗುತ್ತಿದ್ದಾರೆ ಹೊರತು ಸರ್ಕಾರದಿಂದ ಯಾವುದೇ ಗೌರವ ದೊರೆಯುತ್ತಿಲ್ಲ. ಜ.೨೬ ರಂದು ಗಣರಾಜ್ಯೋತ್ಸವದ ಸಂದರ್ಭ ಕಾರ್ಯಪ್ಪ ಅವರಿಗೆ ಭಾರತರತ್ನ ನೀಡುವ ವಿಶ್ವಾಸವಿತ್ತಾದರೂ ಕೇಂದ್ರ ಇದನ್ನು ಹುಸಿಗೊಳಿಸಿದೆ. ಜಿಲ್ಲೆಯ ಲಕ್ಷಾಂತರ ಜನರ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸುತ್ತಲೇ ಬರುತ್ತಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಕಾರ್ಯಪ್ಪ ಅವರಿಗೆ ಸೇನಾಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ನೀಡಿತು. ಅಲ್ಲದೆ ಫೀಲ್ಡ್ ಮಾರ್ಷಲ್ ಪದವಿ ನೀಡಿ ಗೌರವಿಸಿತು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಸೇನಾನಿಗಳ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವನ್ನಷ್ಟೇ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.