ವೀರಾಜಪೇಟೆ, ಫೆ. ೪: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಪಿ. ಶೀಲಾ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿಯಾಗಿ ಆಗಮಿಸಿದ ಪಶು ವೈಧ್ಯಾಧಿಕಾರಿಗಳಾದ ಟಿ.ಜಿ. ರಾಕೇಶ್ ಅವರ ಸಮ್ಮುಖದಲ್ಲಿ ನಡೆಯಿತು.

ಗ್ರಾಮಸ್ಥರಾದ ಅಬ್ಬಾಸ್ ಮಾತನಾಡಿ, ಗ್ರಾಮದಲ್ಲಿ ರಸ್ತೆಗಳು ಕಿರಿದಾಗಿದ್ದು ಹಲವು ರಸ್ತೆಗಳಲ್ಲಿ ಮಳೆಯಿಂದಾಗಿ ಬೃಹತ್ ಗಾತ್ರದಲ್ಲಿ ಗುಂಡಿಗಳಾಗಿವೆ. ಅಲ್ಲದೆ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆ ಬದಿಗಳಲ್ಲಿ ಕಂದಕಗಳನ್ನು ಕೊರೆದಿದ್ದು ರಸ್ತೆಯು ಧೂಳಿನಿಂದ ಕೂಡಿದೆ ರಸ್ತೆ ದುರಸ್ತಿಗೆ ಪಂಚಾಯಿತಿ ಮುಂದಾಗಬೇಕು. ಗ್ರಾಮದಲ್ಲಿರುವ ಸಮಸ್ಯೆಗಳನ್ನು ಸದಸ್ಯರೊಂದಿಗೆ ಪಂಚಾಯಿತಿ ಅಧ್ಯಕ್ಷರು ಖುದ್ದು ವೀಕ್ಷಣೆ ಮಾಡಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪಿ.ಡಿ.ಓ ಪ್ರಮೋದ್ ಅವರು ಮಳೆಹಾನಿಯಿಂದಾಗಿ ರಸ್ತೆಗಳು ಶಿಥಿಲಗೊಂಡಿವೆ ಅನುದಾನಗಳು ಬಂದಲ್ಲಿ ಹಂತ ಹಂತವಾಗಿ ರಸ್ತೆಯ ದುರಸ್ತಿಗೆ ಮುಂದಾಗುತ್ತೇವೆ. ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ರಸ್ತೆಬದಿಯಲ್ಲಿ ಕಂದಕ ನಿರ್ಮಾಣ ಮಾಡಲಾಗಿದೆ. ಕಾಮಗಾರಿಗಳು ಮುಗಿದ ನಂತರದಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದರು.

ಗ್ರಾಮದಲ್ಲಿರುವ ಪ್ರಮುಖ ರಸ್ತೆಗಳ ಬದಿಯನ್ನು ಕೆಲವು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ ಬಾಳೆ ಮತ್ತು ಇನ್ನಿತರ ಕೃಷಿ ಮಾಡುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು. ಒತ್ತುವರಿ ಮಾಡಿ ಕೊಂಡಿರುವ ಗ್ರಾಮಸ್ಥರಿಗೆ ಪಂಚಾಯಿತಿ ವತಿಯಿಂದ ನೋಟೀಸ್ ಜಾರಿ ಮಾಡಲು ತೀರ್ಮಾನಿಸಿತು.

ಜಲಜೀವನ್ ಯೋಜನೆ ಅಡಿಯಲ್ಲಿ ಮನೆಮನೆಗೆ ಕುಡಿಯುವ ನೀರಿನ ನಲ್ಲಿ ಅಳವಡಿಕೆ ಮಾಡುತ್ತಿ ರುವ ಕಾಮಗಾರಿಗಳು ಕಳಪೆಯಾಗಿವೆ. ಈ ಹಿಂದೆ ಕಿರು ನೀರು ಯೋಜನೆ ಅಡಿಯಲ್ಲಿ ಅಳವಡಿಸಲಾದ ಪೈಪ್‌ಗಳಿಗೆ ಹೊಸ ಯೋಜನೆಯ ಪೈಪ್ ಅಳವಡಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ಪಿ.ಡಿ.ಓ ಪ್ರಮೋದ್ ಅವರು, ಮನೆಮನೆಗೆ ಕುಡಿಯುವ ನೀರಿನ ಸಂಪರ್ಕ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಮಗಾರಿಗಳು ಕಳಪೆಯಾದಲ್ಲಿ ಸೂಕ್ತ ಕ್ರಮವಹಿಸಲಾಗುತ್ತದೆ. ಎಂದು ಹೇಳಿದರು.

ಸದಸ್ಯರಾದ ಪರಮೇಶ್ವರ್ ಮಾತನಾಡಿ ೨೦೧೧ ರಲ್ಲಿ ಬಾಡಿಕಾಡ್ ಎಂಬಲ್ಲಿ ನಿವೇಶನ ರಹಿತರಿಗೆ ಸೂರು ಒದಗಿಸಿಕೊಡುವ ನಿಟ್ಟಿನಲ್ಲಿ ಸುಮಾರು ೬೬ ಮಂದಿಗೆ ಹಕ್ಕುಪತ್ರ ವಿತರಣೆಯಾಗಿದೆ ಅಲ್ಲದೆ ತಲಾ ೭೫ ಸಾವಿರದಂತೆ ಮನೆ ನಿರ್ಮಾಣಕ್ಕೆ ಅನುದಾನ ನೀಡಿದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇತರರು ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದರು. ನಿವೇಶನ ಪಡೆದಿರುವವರಿಗೆ ನೀಡಿರುವ ಅನುದಾನದಲ್ಲಿ ಮನೆ ನಿರ್ಮಾಣ ಕಷ್ಟಸಾದ್ಯ ಈ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಅನುಧಾನಗಳನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಣಯ ಕೈಗೊಂಡಿತು.

ಗ್ರಾಮದಲ್ಲಿ ಕಾಡಾನೆಗಳ ಉಪಟಳ ನಿಯಂತ್ರಿಸಿ ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರಣ್ಯಧಿಕಾರಿಗಳಿಗೆ ಮನವಿ ಮಾಡಿದರು. ನಿವೇಶನ ರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವಿಕರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಎಂ. ಶೀಲಾ ಮಾತನಾಡಿ, ಗ್ರಾಮದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕೈಗೊಳ್ಳಲಾಗುವುದು ಎಂದರಲ್ಲದೆ ಕಾಮಗಾರಿಗಳಲ್ಲಿ ಲೋಪವಾಗದಂತೆ ಎಚ್ಚರ ವಹಿಸುವಂತೆ ಪಿ.ಡಿ.ಒ ಅವರಿಗೆ ಸೂಚಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.