ಮಡಿಕೇರಿ, ಫೆ. ೪: ಗಾಳಿಬೀಡು ಗ್ರಾಮದಲ್ಲಿ ಕತ್ತಲೆಕೋಣೆಯೊಳಗೆ ಬಂಧಿಯಾಗಿದ್ದು, ನಂತರ ಹಲವರ ಪ್ರಯತ್ನದ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಯುವತಿ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲವಾದರೂ ನಿಧಾನಗತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರುವದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬAಧಿಸಿದ ಸಖಿ ಒನ್‌ಸ್ಟಾಫ್‌ನ ಅಧಿಕಾರಿಯಾಗಿರುವ ಪ್ರಭಾ ಅವರು ತಿಳಿಸಿದ್ದಾರೆ.
ಆಕೆಯನ್ನು ಮನೆಗೆ ಕಳುಹಿಸದಂತೆ ಸ್ಥಳೀಯ ಕೆಲವರು ಇಲಾಖೆಗೆ ಮನವಿ ಮಾಡಿದ್ದು, ಆಕೆ ಮತ್ತೆ ಕಿರುಕುಳ ಅನುಭವಿಸುವ ಸಾಧ್ಯತೆ ಇರುವುದರಿಂದ ಇಲಾಖೆಯವರೇ ಆಕೆಯ ಮುಂದಿನ ಭವಿಷ್ಯದ ಬಗ್ಗೆ ಗಮನ ಹರಿಸಬೇಕೆಂದು ವಿನಂತಿಸಿದ್ದಾರೆ. ಈ ನಡುವೆ ಕೆಲವರು ಪೊಲೀಸ್ ಇಲಾಖೆಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ದ್ದಾರೆನ್ನಲಾಗಿದೆ.
ಬಂಧಿಯಾಗಿದ್ದ ಯುವತಿ ಸರಕಾರಿ ಅಧಿಕಾರಿಯ ವಾಹನ ಚಾಲಕ ಧನಂಜಯ (ಗಣಪತಿ) ಅವರ ಪುತ್ರಿಯಾಗಿದ್ದಾಳೆ. ಪೊಲೀಸ್ ಇಲಾಖೆಗೆ ಬಂದಿರುವ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಾಸ್ತವ ವರದಿಯನ್ನು ನೀಡುವಂತೆ ನೋಟೀಸ್ ಜಾರಿಗೊಳಿಸಿದ್ದಾರೆ. ಈ ಬಗ್ಗೆ ಎಲ್ಲಾ ವಿವರವನ್ನು ಪೊಲೀಸರಿಗೆ ನೀಡಲಾಗುವುದು. ಬಳಿಕ ಪೊಲೀಸರು ಯಾವ ಕ್ರಮ ಅನುಸರಿಸಲಿದ್ದಾರೆ ಎಂಬದು ಪೊಲೀಸ್ ಇಲಾಖೆಗೆ ಬಿಟ್ಟಿದೆ. ಸದ್ಯಕ್ಕೆ ಯುವತಿಯ ಯೋಗಕ್ಷೇಮ ನೋಡಿಕೊಳ್ಳಲು ತಮ್ಮ ಇಲಾಖೆ ಸಿದ್ದವಿರುವುದಾಗಿ ಪ್ರಭಾ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.