ಕೂಡಿಗೆ, ಫೆ. ೪: ಪ್ರಸಕ್ತ ಸಾಲಿನಲ್ಲಿ ರಾಜ್ಯದ ೨೧ ಡಿಸಿಸಿ ಬ್ಯಾಂಕುಗಳ ಮೂಲಕ ರಾಜ್ಯದ ೩೦,೮೬,೦೦೦ ರೈತರಿಗೆ ಕೆಸಿಸಿ ಸಾಲ ಯೋಜನೆಯಡಿ ರೂ. ೨೦,೮೧೦ ಕೋಟಿ ಸಾಲ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ; ಇದರ ಸದುಪಯೋಗಪಡೆದು ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಹೆಬ್ಬಾಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವರ್ಷ ರಾಜ್ಯದ ರೈತರಿಗೆ ರೂ. ೧೬೭೯೫ ಕೋಟಿ ಸಾಲ ವಿತರಿಸಲಾಗಿದ್ದು ಶೇ. ೯೪ ರಷ್ಟು ವಸೂಲಾತಿ ಮಾಡಲಾಗಿದೆ. ಈ ಸಾಲಿನಲ್ಲಿ ಈಗಾಗಲೇ ೨೦ ಲಕ್ಷ ರೈತರಿಗೆ ರೂ. ೧೪ ಸಾವಿರ ಕೋಟಿ ಸಾಲ ವಿತರಿಸಲಾಗಿದ್ದು, ಮಾರ್ಚ್ ೫ ರ ಒಳಗಾಗಿ ಈ ಗುರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಕೃಷಿಗೆ ಉತ್ತೇಜನ ನೀಡುತ್ತಿರುವ ಹಾಗೆ ಸಹಕಾರ ಕ್ಷೇತ್ರಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ. ಅದರ ಮುಖೇನ ರೈತರು ಆರ್ಥಿಕವಾಗಿ ಮುಂದುವರೆಯಲು ಸಹಾಯವಾಗುತ್ತದೆ.

ಎಲ್ಲಾ ಸಹಕಾರ ಸಂಘಗಳಲ್ಲಿ ಸಾಲ ವಿತರಣೆಗೆ ಸಮಾನ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ತಾರತಮ್ಯ ಉಂಟಾಗಲು ಅವಕಾಶ ನೀಡಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಮೂರು ಸಹಕಾರ ಸಂಘಗಳ ಸ್ಥಾಪನೆಯಿಂದ ಅನಾರೋಗ್ಯಕರ ಪೈಪೋಟಿ ಏರ್ಪಡುವ ಕಾರಣ ಪಂಚಾಯಿತಿಯಲ್ಲಿ ಒಂದು ಸಹಕಾರ ಸಂಘ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಸಂಘ ಲಾಭದಾಯಕವಾಗಿ ಮುನ್ನಡೆಯಲು ಸಹಕಾರಿಯಾಗಲಿದೆ ಎಂದರು.

ಸಹಕಾರ ಕ್ಷೇತ್ರದ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅವರ ಕಾಳಜಿ ಅಪಾರವಾಗಿದೆ. ಸಹಕಾರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದಾ ಧ್ವನಿ ಎತ್ತುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಕಾಳಜಿ ವಹಿಸುತ್ತಾರೆ. ಕೇಂದ್ರದಲ್ಲಿ ಸಹಕಾರ ಸಚಿವಾಲಯ ಪ್ರತ್ಯೇಕವಾಗಿ ಸ್ಥಾಪನೆಯಾದ ಬಳಿಕ ಕ್ಷೇತ್ರದ ಪ್ರಗತಿ ಯೋಜನೆಗಳು ರೂಪುಗೊಳ್ಳುತ್ತಿದೆ ಎಂದರು.

ಜಿಲ್ಲೆಯಲ್ಲಿ ಶೇ. ೯೮ ಸಹಕಾರ ಸಂಘಗಳು ಲಾಭದಾಯಕವಾಗಿದ್ದು, ಎರಡು ಸಂಘಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ವಂಚನೆ ಪ್ರಕರಣಗಳಿಂದ ಇಡೀ ಕ್ಷೇತ್ರಕ್ಕೆ ಕಳಂಕ ಉಂಟಾಗಿದೆ. ಈ ಪ್ರಕರಣಗಳಲ್ಲಿ ಉಂಟಾಗಿರುವ ವಂಚನೆ (ಮೊದಲ ಪುಟದಿಂದ) ಸರಿದೂಗಿಸಲು ಆರೋಪಿಗಳ ಆಸ್ತಿ ಜಪ್ತಿ ಮಾಡಿ ವಂಚನೆ ಮೊತ್ತ ಮರುಪಾವತಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಸಕಾಲದಲ್ಲಿ ಆಡಿಟ್ ವರದಿಗಳು ಸಿದ್ಧವಾದಲ್ಲಿ ಮಾತ್ರ ಇಂತಹ ವಂಚನೆಗಳ ಬಗ್ಗೆ ನಿಗಾವಹಿಸಲು ಸಾಧ್ಯ ಎಂದರು. ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗೆ ಬಾಕಿ ಉಳಿದಿರುವ ೧೦ ಕೋಟಿ ರೂ.ಗಳ ಸಾಲಮನ್ನಾ ಯೋಜನೆ ಮೊತ್ತ ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅAಗಡಿ ಮಳಿಗೆಗಳನ್ನು ಉದ್ಘಾಟಿಸಿದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿ ಶುದ್ಧ ಹಸ್ತ ಹೊಂದಿದಾಗ ಮಾತ್ರ ಆ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಖಾಸಗಿ ಬ್ಯಾಂಕುಗಳಿಗಿAತ ಕಡಿಮೆ ಅವಧಿಯಲ್ಲಿ ೫ ಲಕ್ಷ ರೂ.ವರೆಗೆ ಸಾಲ ವಿತರಣೆ ಸೌಲಭ್ಯ ಸಹಕಾರ ಸಂಘಗಳ ಮೂಲಕ ಆಗುತ್ತಿದೆ. ಇಂತಹ ಸೌಲಭ್ಯ ಪಡೆದ ರೈತರು, ಸಾಲಗಾರರು ಸಂಘದಿAದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಪ್ರಗತಿಯಲ್ಲಿ ಕೈಜೋಡಿಸಬೇಕಿದೆ ಎಂದರು.

ಈ ಹಿಂದಿನ ಸರಕಾರಗಳು ನಷ್ಟದಲ್ಲಿರುವ ಸಹಕಾರ ಸಂಘಗಳನ್ನು ವಿಲೀನಗೊಳಿಸುವ ಕಾರ್ಯ ಮಾಡುತ್ತಿತ್ತು. ಆದರೆ ಪ್ರಸಕ್ತ ಸರಕಾರ ಗ್ರಾಮ ಪಂಚಾಯಿತಿಗೆ ಒಂದು ಸಹಕಾರ ಸಂಘ ಸ್ಥಾಪನೆಯ ಚಿಂತನೆ ಹೊಂದಿದೆ. ರಾಜ್ಯ ಸಹಕಾರ ಸಂಘಗಳ ಡಿಜಿಟಲೀಕರಣ ವ್ಯವಸ್ಥೆ ಕಾರ್ಯ ಕೂಡ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಅಭಿವೃದ್ಧಿಯೊಂದಿಗೆ ದೇಶದ ಆರ್ಥಿಕ ಸ್ಥಿತಿ ಕೂಡ ಪ್ರಗತಿ ಹೊಂದಲು ಸಾಧ್ಯವಿದೆ. ಅತಿವೃಷ್ಟಿಯಿಂದ ಬೆಳೆ ನಾಶ ಹೆಚ್ಚಾಗಿದ್ದು ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಕಷ್ಟವಾಗಿದೆ. ಇದಕ್ಕೆ ಸರಕಾರ ವಿಶೇಷ ಯೋಜನೆ ರೂಪಿಸಿ ಬೆಳೆಗಾರರಿಗೆ, ರೈತರಿಗೆ ಹೆಚ್ಚಿನ ಸಹಕಾರ ನೀಡಬೇಕಿದೆ ಎಂದರು.

ನಗದು ಕೌಂಟರ್ ಉದ್ಘಾಟಿಸಿದ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾತನಾಡಿ, ೧೧೫ ವರ್ಷಗಳ ಇತಿಹಾಸ ಹೊಂದಿರುವ ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯದಲ್ಲಿಯೇ ಉತ್ತಮ ಹೆಸರು ಗಳಿಸಿದೆ ಎಂದರು. ಹೆಬ್ಬಾಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜೆ. ಪರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಬೆಳೆದು ಬಂದ ಹಾದಿಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಮತ್ತು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಧುರೀಣರು ಹಾಗೂ ಉತ್ತಮ ಕಾರ್ಯನಿರ್ವಹಣೆ ತೋರಿದ ಅಧಿಕಾರಿ, ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಡಿ. ಮಂಜುನಾಥ್, ಬಿ.ಕೆ. ಚಿಣ್ಣಪ್ಪ, ಭರತ್ ಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ, ಸಹಾಯಕ ನಿಬಂಧಕ ಹೆಚ್.ಡಿ. ರವಿಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಮಾಜಿ ಸದಸ್ಯ ಹೆಚ್.ಆರ್. ಶ್ರೀನಿವಾಸ್, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಉಪಾಧ್ಯಕ್ಷ ಟಿ.ಬಿ. ಜಗದೀಶ್, ನಿರ್ದೇಶಕ ಹೆಚ್.ಟಿ. ನಾಗೇಶ್, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್. ಲೋಕೇಶ್, ಹೆಬ್ಬಾಲೆ ಸಂಘದ ಉಪಾಧ್ಯಕ್ಷೆ ಕವಿತಾ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎನ್. ಗಿರೀಶ್, ಸಂಘದ ನಿರ್ದೇಶಕರಾದ ಹೆಚ್.ಟಿ. ದಿನೇಶ್, ಸೋಮಶೇಖರ್, ಮಹದೇವ, ಜಲೇಂದ್ರ, ಮೋಹನ್, ಸಿಬ್ಬಂದಿಗಳು ಇದ್ದರು.