*ಗೋಣಿಕೊಪ್ಪ, ಫೆ. ೪: ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗುರಿಯನ್ನು ಹೊಂದುವುದರೊAದಿಗೆ ಗಿರಿಜನರ ಅಭಿವೃದ್ಧಿಗೆ ಹೆಚ್ಚು ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವುದಾಗಿ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿಗೊಂಡ ಕಾಮಗಾರಿಗಳಾದ ಶ್ರೀ ಕಾಲಭೈರೇಶ್ವರ ದೇವಸ್ಥಾನ ರಸ್ತೆ, ಡಿಜಿಟಲ್ ಗ್ರಂಥಾಲಯ, ಉದ್ಯಾನವನ, ಅಂಚೆ ಕಚೇರಿ, ನ್ಯಾಯಬೆಲೆ ಅಂಗಡಿ, ಕಸ ವಿಲೇವಾರಿ ಘಟಕಗಳನ್ನು ಸಾರ್ವಜನಿಕ ಸೇವೆಗಳಿಗೆ ಸಮರ್ಪಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಸರ್ಕಾರದ ಬೆಳಕು ಯೋಜನೆ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ರಸ್ತೆ ಮತ್ತು ಪಂಚಾಯಿತಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಶೀಘ್ರಗತಿಯಲ್ಲಿ ತನ್ನ ಗುರಿಯನ್ನು ತಲುಪಿದೆ. ಡಿಜಿಟಲ್ ಗ್ರಂಥಾಲಯ ನಿರ್ಮಾಣದ ಗುರಿಯನ್ನು ದೇಶಕ್ಕೆ ಪ್ರಥಮವಾಗಿ ಕೊಡಗು ಜಿಲ್ಲೆ ತಲುಪಿದೆ. ಈ ಬಗ್ಗೆ ಪ್ರದಾನಮಂತ್ರಿಗಳ ಸಚಿವಾಲಯದಿಂದ ಗುರಿ ಮುಟ್ಟಿದ ಕಾರ್ಯ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ ಪತ್ರವನ್ನು ನೀಡಲಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ಬೆಳಕು ಯೋಜನೆಯನ್ನು ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ತಲುಪಿಸಲು ಕ್ರಮ ಕೈಗೊಂಡು ಯಶಸ್ವಿಯ ನಡೆಯನ್ನು ಕಂಡಿದೆ. ಬೆಳಕು ಯೋಜನೆಯ ಫಲಾನುಭವಿಗಳಾಗಲು ಸ್ಥಳೀಯ ವಿದ್ಯುತ್ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಹಕ್ಕುಪತ್ರ ವಿತರಣೆಯಲ್ಲಿಯೂ ಪ್ರಗತಿಯ ಸಾಧನೆಯನ್ನು ಕಂಡಿದೆ. ಶೇ. ೮೫ ರಷ್ಟು ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿಗಳನ್ನು ಕಂಡುಕೊಳ್ಳಲಾಗಿದೆ. ಕೆಲವು ತಿಂಗಳುಗಳಲ್ಲಿ ಸಂಪೂರ್ಣ ಫಲಿತಾಂಶವನ್ನು ಹೊಂದಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮೋದಿಯವರಿಗೆ ಪತ್ರ ಬರೆಯುವ ಚಿಂತನೆ ಇದೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಮೋದಿ ಸರ್ಕಾರದ ಆಡಳಿತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಪಂಚಾಯಿತಿಯನ್ನು ಉನ್ನತೀಕರಣ ಗೊಳಿಸಿ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ವಿಮುಕ್ತಿಗೊಳಿಸಿ ಸುಭೀಕ್ಷೆಯೆಡೆಗೆ ಕೊಂಡೊಯ್ಯುವ ಕಾರ್ಯ ಸಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷ ಪಡಿಜ್ಞಾರಂಡ ಕವಿತಪ್ರಭು, ಸದಸ್ಯರುಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಕವಿತಾ, ವಿ.ಆರ್. ಅಮ್ಮುಣಿ, ಅಮ್ಮಯ್ಯ, ರಾಜು, ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ರಾಜ್ಯ ಕೃಷಿ ಮೋರ್ಚಾ ಉಪಾಧ್ಯಕ್ಷೆ, ಜಿಲ್ಲಾ ಉಸ್ತುವಾರಿ ಮಾಪಂಗಡ ಯಮುನಾ ಚಂಗಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಮೇಚಂಡ ಸೋಮಯ್ಯ ಹಾಜರಿದ್ದರು.