ಗೋಣಿಕೊಪ್ಪಲು, ಫೆ. ೩: ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಭಾಗದಲ್ಲಿ ನಡೆದ ಹುಲಿ ದಾಳಿ ಪ್ರದೇಶಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ತಿತಿಮತಿ ಭಾಗದ ಎಸಿಎಫ್ ಉತ್ತಪ್ಪ ಅವರನ್ನು ಕರೆಸಿಕೊಂಡ ಶಾಸಕರು ಹುಲಿ ಹಾವಳಿಯ ಬಗ್ಗೆ ಇಲಾಖೆಯ ಸಿಬ್ಬಂದಿಗಳು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಗ್ರಾಮದ ಹಿರಿಯ ಮುಖಂಡ ಬಿಜೆಪಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ತೀತಮಾಡ ಲಾಲ ಭೀಮಯ್ಯ ಈ ಭಾಗದಲ್ಲಿ ಹುಲಿ ಹಾವಳಿ ಅಷ್ಟಾಗಿ ಇರಲಿಲ್ಲ, ಆದರೆ ಇದೀಗ ಹುಲಿ ಕಾಣಿಸಿಕೊಂಡಿವೆ. ಈ ಭಾಗದ ರೈತರು ತಮ್ಮ ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿರುವ ಸಂದರ್ಭ ಹುಲಿ ಕಾಣಿಸಿಕೊಂಡು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಹೀಗಾಗಿ ಈ ಭಾಗದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹುಲಿಯನ್ನು ಸೆರೆಹಿಡಿಯುವ ಸಲುವಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಹಸುವನ್ನು ಕಳೆದುಕೊಂಡ ರೈತನಿಗೆ ಕೂಡಲೇ ಪರಿಹಾರ ನೀಡಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ ಅವರು ಸ್ಥಳದಲ್ಲಿದ್ದ ಎಸಿಎಫ್ ಉತ್ತಪ್ಪ ಅವರಿಗೆ ಈ ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಂಬಿAಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಜನರೊಂದಿಗೆ ಇಲಾಖೆಯ ಅಧಿಕಾರಿಗಳು ಗೌರವದಿಂದ ವರ್ತಿಸುವಂತೆಯೂ, ಕೂಡಲೇ ಇಲಾಖೆಯ ನಿಯಮದಡಿಯಲ್ಲಿ ಬರುವ ಪರಿಹಾರವನ್ನು ಸಂಬAಧಿಸಿದ ಮಾಲೀಕರಿಗೆ ನೀಡುವಂತೆಯೂ ಸೂಚಿಸಿದರು.

ಈ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮದ್ರೀರ ಗಿರೀಶ್, ಶಕ್ತಿ ಕೇಂದ್ರ ಪ್ರಮುಖ್ ಬಲ್ಲಡಿಚಂಡ ವಿಜು ಕಾರ್ಯಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಸದಸ್ಯ ತೀತಿಮಾಡ ಲಾಲ ಭೀಮಯ್ಯ, ಗ್ರಾಮದ ಪ್ರಮುಖರಾದ ಅಮ್ಮೆಕಂಡ ಜಿಮ್ಮಿ ಚಂಗಪ್ಪ, ವಿಕ್ಯಾತ್ ಬೆಳ್ಯಪ್ಪ, ಬಾನಂಡ ಸಂಪತ್, ಅಶೋಕ್, ಜಾನುವಾರು ಮಾಲೀಕ ಅಣ್ಣೀರ ಹರಿ, ಇನ್ನಿತರರು ಹಾಜರಿದ್ದರು.